Telegram Join Telegram

ಚಿಂತೆ ಮತ್ತು ನಿಶ್ಚಿಂತೆ | chinte mattu nischinte : ಮಾನಸಿಕ ಒತ್ತಡದಿಂದ ಮುಕ್ತಿ ಪಡೆದು ನೆಮ್ಮದಿಯ ಜೀವನ ರೂಪಿಸಿಕೊಳ್ಳುವುದು ಹೇಗೆ?

ಬರೆದವರು: ರಾಮಕೃಷ್ಣ ಹೆಬ್ಬಾರ್, ಸುರತ್ಕಲ್

ಚಿಂತೆ ಮತ್ತು ನಿಶ್ಚಿಂತೆ | chinte mattu nischinte

ಮನುಷ್ಯನ ಮನಸ್ಸು ತುಂಬಾ ಚಂಚಲ! ಚಿಂತೆ ಮನುಷ್ಯನ ದೇಹ ಮತ್ತು ಮನಸ್ಸು – ಈ ಎರಡನ್ನೂ ಹಾಳು ಮಾಡುವುದು. ಚಿಂತೆಗೆ ಕಾರಣಗಳೇನು? ಎಂದರೆ ಉತ್ತರಿಸಲು ಸುಲಭ ಸಾಧ್ಯವಲ್ಲ! ಆರ್ಥಿಕ ತೊಂದರೆ, ನಿರುದ್ಯೋಗ, ಭವಿಷ್ಯದ ಬಗ್ಗೆ ಗೊಂದಲ, ಹೀಗೆ ಹತ್ತಾರು ಕಾರಣಗಳೂ ಇವೆ!

ಭಾರತೀಯರಲ್ಲಿ ಆಧ್ಯಾತ್ಮಿಕ ಗುಣಗಳೇ ಹೆಚ್ಚು! ಹೀಗಿರಲು ಐಷಾರಾಮವೇ ಜೀವನ ಎಂದಾಗಬಾರದು. ಸುಖ, ದುಃಖ ಎಂಬುದು ಬದುಕಿನಲ್ಲಿ ಹಗಲು ರಾತ್ರಿ ಎಂಬಂತೆ ಇದ್ದರೂ ಉತ್ತಮವಾಗಿ ಸಂತೋಷದಿಂದ ಜೀವನ ನಡೆಸುವುದು ಪ್ರತಿಯೊಬ್ಬರ ಉದ್ದೇಶವೆಂದರೂ ತಪ್ಪಾಗಲಾರದು!

ನಾನು ಚಿಂತೆಯೇ ಇಲ್ಲದವ, ಸಂತೋಷವಾಗಿದ್ದೇನೆಂದು ಯಾರಾದರೂ ಹೇಳಿದರೆ, ಆತನು ಸುಖವಾಗಿದ್ದಾನೆಂದು ಅರ್ಥವಲ್ಲ! ಚಿಂತೆಯು ಮಾನವನ ಮನಸ್ಸಿನ ಸರ್ವ ಸಾಮಾನ್ಯ ಪ್ರಕ್ರಿಯೆಯಾಗಿದೆ! ಹುಟ್ಟಿನಿಂದ ಮರಣದ ತನಕವೂ ಬಾಳಿನಲ್ಲಿ ಒಂದಲ್ಲ ಒಂದು ಚಿಂತೆ ಕಾಡುತ್ತಲೇ ಇರುತ್ತದೆ. ಮಾನಸಿಕವಾಗಿಯೂ, ದೈಹಿಕವಾಗಿಯೂ ಚಿಂತೆಯು ವ್ಯಕ್ತಿಯನ್ನು ಜರ್ಝರಿತಗೊಳಿಸುತ್ತದೆ! ಚಿಂತೆಯಿಂದ ನರಳುವವರಿಗೆ ತಾರುಣ್ಯವು ಬೇಗನೇ ಕಣ್ಮರೆಯಾಗಿ ವೃದ್ಧಾಪ್ಯವೇ ಬಹು ಬೇಗ ಆಗಮಿಸಬಹುದು! ಆಧುನಿಕ ಜೀವನವು ಸಂಕೀರ್ಣವೂ, ಜಟಿಲವೂ ಆಗತೊಡಗಿದೆ! ಎಲ್ಲಾ ದಿಕ್ಕುಗಳಲ್ಲೂ ಮೋಸ, ವಂಚನೆ, ವಿಶ್ವಾಸಘಾತಕತನ – ಹರಿಯುತ್ತಾ ಸಾಗಿದೆ. ಚಿತೆಯು ನಿರ್ಜೀವ ದೇಹವನ್ನು ದಹಿಸಿದರೆ, ಚಿಂತೆ ಜೀವಂತ ವ್ಯಕ್ತಿಯನ್ನು ನಿರಂತರ ದಹಿಸುತ್ತದೆ.

ಚಿಂತೆಗೆ ಮೂಲ ಕಾರಣಗಳು

ಚಿಂತೆಗೆ ಒಂದೇ ಒಂದು ನಿರ್ದಿಷ್ಟ ಕಾರಣವನ್ನು ನೀಡುವುದು ಕಷ್ಟ. ಆಧುನಿಕ ಜೀವನಶೈಲಿಯು ದಿನದಿಂದ ದಿನಕ್ಕೆ ಸಂಕೀರ್ಣವೂ ಹಾಗೂ ಜಟಿಲವೂ ಆಗುತ್ತಿದೆ. ಅನೇಕ ಸುಖೀ ಕುಟುಂಬಗಳ ಮೇಲೆ ಇದ್ದಕ್ಕಿದ್ದಂತೆ ವಿಪತ್ತುಗಳು ಬಂದೊದಗುತ್ತವೆ!

ಆರ್ಥಿಕ ಮತ್ತು ಉದ್ಯೋಗದ ಸಮಸ್ಯೆಗಳು: ನಿರುದ್ಯೋಗ, ಆರ್ಥಿಕ ಮುಗ್ಗಟ್ಟು, ಉದ್ಯೋಗ ಕಳೆದುಕೊಳ್ಳುವ ಭೀತಿ, ವ್ಯಾಪಾರದಲ್ಲಿ ಲಾಭ-ನಷ್ಟಗಳ ಗೊಂದಲ.

ವೈಯಕ್ತಿಕ ಹಾಗೂ ಕುಟುಂಬಿಕ ಕಷ್ಟಗಳು: ಪ್ರೀತಿಪಾತ್ರರ ಮರಣ, ವಾಸಿಯಾಗದ ಘೋರ ಕಾಯಿಲೆಗಳು, ಪರೀಕ್ಷೆಯಲ್ಲಿ ಅನುತೀರ್ಣರಾಗುವುದು, ಭಗ್ನಪ್ರೇಮ, ಗೃಹಿಣಿಯರಿಗೆ ಕುಟುಂಬದ ಯೋಗಕ್ಷೇಮದ ಚಿಂತೆ.

ಸಾಮಾಜಿಕ ಸವಾಲುಗಳು: ಸಮಾಜದಲ್ಲಿ ಹೆಚ್ಚುತ್ತಿರುವ ಮೋಸ, ವಂಚನೆ, ವಿಶ್ವಾಸಘಾತಕತನ ಹಾಗೂ ಆಧುನಿಕ ಕಂಪ್ಯೂಟರ್ ತಂತ್ರಜ್ಞಾನದಿಂದ ಉಂಟಾಗುವ ಒತ್ತಡಗಳು.

ಚಿಂತೆಯ ದುಷ್ಪರಿಣಾಮಗಳು

ಬೆಟ್ಟದಷ್ಟು ಚಿಂತೆಯನ್ನು ಹೊತ್ತವನು-ಆತ್ಮಹತ್ಯೆಗೈಯ್ಯಬಹುದು! ಮಿತಿಮೀರಿದ ಕುಡಿತದ ಚಟಕ್ಕೆ ಅಂಟಿಕೊಳ್ಳಬಹುದು! ವೃದ್ಧಾಪ್ಯ ಬೇಗನೇ ಬರಲೂ ಕಾರಣವಾಗಬಹುದು ! ಉತ್ತಮ ಅಂಕಗಳಿಸಿ ತೇರ್ಗಡೆಯಾದ ಬಳಿಕ ಒಳ್ಳೆಯ ನೌಕರಿ ಪಡೆಯುವ ಚಿಂತೆ. ಲಾಭ-ನಷ್ಟಗಳ ಬಗ್ಗೆ ವ್ಯಾಪಾರಿಗಳ ಚಿಂತೆ. ಗೃಹಿಣಿಯರಿಗೆ ತನ್ನ ಕುಟುಂಬದ ಯೋಗಕ್ಷೇಮದ ಬಗ್ಗೆ ಚಿಂತೆ! ಚಿಂತೆಯಿಂದ ಸಂಪೂರ್ಣ ಮುಕ್ತರು ಎಂದು ಆತ್ಮವಿಶ್ವಾಸದಿಂದ ಹೇಳಿಕೊಳ್ಳಬಲ್ಲ ವ್ಯಕ್ತಿ ಯಾರಿದ್ದಾರೆ ಎಂಬುದೂ ಯಕ್ಷ ಪ್ರಶ್ನೆಯೇ ಸರಿ !

ಚಿಂತೆಯಿಂದ ಮುಕ್ತಿಗೆ ಪರಿಹಾರ ಮಾರ್ಗಗಳು

ಚಿಂತೆಯಿಂದ ಬಿಡುಗಡೆ ಹೊಂದಲು ಜ್ಞಾನಿಗಳು, ಧರ್ಮಬೋಧಕರು ಹಾಗೂ ಸಂತರು ಹಲವಾರು ಮಾರ್ಗಗಳನ್ನು ಸೂಚಿಸಿದ್ದಾರೆ.

ಪ್ರಾರ್ಥನೆ ಮತ್ತು ಧ್ಯಾನ: ಪ್ರಾರ್ಥನೆಯು ಮನಸ್ಸಿಗೆ ಶಕ್ತಿ ಮತ್ತು ಶಾಂತಿಯನ್ನು ನೀಡುತ್ತದೆ. ಆಧ್ಯಾತ್ಮಿಕ ಚಿಂತನೆ ಹಾಗೂ ದಿನನಿತ್ಯದ ಪ್ರಾರ್ಥನೆಯು ಹಲವು ಮಾನಸಿಕ ಹಾಗೂ ದೈಹಿಕ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ ಎಂದು ಆರೋಗ್ಯ ಶಾಸ್ತ್ರಜ್ಞರೂ ಒಪ್ಪಿಕೊಂಡಿದ್ದಾರೆ.

ಎಂತಾದರೂ ಚಿಂತೆ ಈ ಜೀವಕ್ಕೇ |
ಎನ್ನ ಮನವು ಶ್ರೀ ರಂಗನೊಳ್ ನೆಲಸುವ ತನಕ |

ಎಂಬ ದಾಸ ವರೇಣ್ಯರ ಹಾಡಿನಂತೆ ದಿನದಿನವೂ ಪ್ರಾರ್ಥನೆ ಧ್ಯಾನ ಗೆಲುವಿನ ಜೀವನಕ್ಕೆ ದಾರಿ!. ಮನಸ್ಸು ದೇವನಲ್ಲಿ ನೆಲೆಸಿದಾಗ ಚಿಂತೆ ದೂರವಾಗುತ್ತದೆ.

ಆತ್ಮವಿಶ್ವಾಸ ಮತ್ತು ಧೈರ್ಯ: “ಆದದ್ದಾಗಲಿ” ಎಂಬ ಧೈರ್ಯ ಹಾಗೂ ದೃಢ ಆತ್ಮವಿಶ್ವಾಸವಿದ್ದರೆ ಚಿಂತೆ ನಮ್ಮ ಹತ್ತಿರವೂ ಸುಳಿಯಲಾರದು.

ಸಕಾರಾತ್ಮಕ ಹವ್ಯಾಸಗಳು: ಬಿಡುವಿನ ವೇಳೆಯಲ್ಲಿ ಮನಸ್ಸನ್ನು ಉಲ್ಲಾಸಗೊಳಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ. ಒಳಾಂಗಣ ಮತ್ತು ಹೊರಾಂಗಣ ಆಟಗಳು, ಸಂಗೀತ ಆಲಿಸುವುದು, ಯಕ್ಷಗಾನ, ನಾಟಕ ಹಾಗೂ ಉತ್ತಮ ಕಾರ್ಯಕ್ರಮಗಳನ್ನು ವೀಕ್ಷಿಸುವುದು, ಪ್ರವಾಸ ಮಾಡುವುದು, ನಾಣ್ಯ, ಚಿತ್ರ ಅಥವಾ ಸ್ಟಾಂಪ್ ಸಂಗ್ರಹದಂತಹ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು

ಉಪಸಂಹಾರ

ಸುಖ-ದುಃಖಗಳು ಜೀವನದಲ್ಲಿ ಹಗಲು-ರಾತ್ರಿಯಿದ್ದಂತೆ ಬಂದು ಹೋಗುತ್ತವೆ. ಭೌತಿಕ ಐಷಾರಾಮವೇ ಅಂತಿಮ ಜೀವನವಲ್ಲ. ಚಿಂತೆಯನ್ನು ಬಿಟ್ಟು ನಗುನಗುತ್ತಾ ಬದುಕುವುದೇ ಜೀವನದ ನಿಜವಾದ ಗೆಲುವು. ಸಕಾರಾತ್ಮಕ ಆಲೋಚನೆ ಹಾಗೂ ಸಕ್ರಿಯ ಜೀವನಶೈಲಿಯಿಂದ ಒತ್ತಡಕ್ಕೆ ಮುಕ್ತಿ ನೀಡಿ “ನಿಶ್ಚಿಂತರಾಗಿ” ಜೀವಿಸುವುದು ಪ್ರತಿಯೊಬ್ಬರ ಗುರಿಯಾಗಬೇಕು. ಚಿಂತೆ ಬಿಡಿ! ಟೆನ್ಶನ್ ಏಕೆ? ಚಿಂತೆ ಮರೆತು ನಗುನಗುತ್ತಾ ಇರಿ! ಆಗಲೇ ಟೆನ್ಶನ್ಗೇ ಜಂಕ್ಷನ್!