Telegram Join Telegram

ಶ್ರೀ ಕೃಷ್ಣ ಜನ್ಮಾಷ್ಟಮಿ: ಕೃಷ್ಣಾವತಾರ, ಕಂಸವಧೆಯ ಹಿನ್ನೆಲೆ ಮತ್ತು ಪೂಜಾ ಮಂತ್ರಗಳು | Sri Krishna Janmashtami story

ಶ್ರೀ ಕೃಷ್ಣ ಜನ್ಮಾಷ್ಟಮಿ: ಕೃಷ್ಣಾವತಾರ, ಕಂಸವಧೆಯ ಹಿನ್ನೆಲೆ ಮತ್ತು ಪೂಜಾ ಮಂತ್ರಗಳು | Sri Krishna Janmashtami story

ಪ್ರತಿ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಬ್ಬವನ್ನು ಭಾದ್ರಪದ ಕೃಷ್ಣ ಪಕ್ಷದ ಅಷ್ಟಮಿ ದಿನಾಂಕದಂದು ಆಚರಿಸಲಾಗುತ್ತದೆ. ಶ್ರೀ ಕೃಷ್ಣನನ್ನು ಭಗವಾನ್ ವಿಷ್ಣುವಿನ ಎಂಟನೇ ಅವತಾರವೆಂದು ಪರಿಗಣಿಸಲಾಗಿದೆ.

ಕಂಸನ ಕ್ರೂರತೆ ಮತ್ತು ಅಶರೀರವಾಣಿ

ಮಥುರೆಯಲ್ಲಿ ಉಗ್ರಸೇನನೆಂಬ ರಾಜನಿದ್ದ, ಆತನ ಮಗನೇ ಕಂಸ. ಈತ ಕರುಣೆ ಇಲ್ಲದ ಕ್ರೂರ ವ್ಯಕ್ತಿ. ಮಥುರೆಯ ಪ್ರತಿಯೊಬ್ಬರೂ ಅವನ ಕ್ರೂರ ಮತ್ತು ದುಷ್ಟ ಸ್ವಭಾವಕ್ಕೆ ಹೆದರುತ್ತಿದ್ದರು. ಕಂಸ ಪ್ರೀತಿಸುವ ಒಬ್ಬ ವ್ಯಕ್ತಿಯೆಂದರೆ, ಆತನ ಸಹೋದರಿ ದೇವಕಿ. ಆಕೆ ದಯೆ, ಪ್ರೀತಿ ಮತ್ತು ಕಾಳಜಿಯುಳ್ಳವಳು. ದೇವಕಿಯ ಮದುವೆಯನ್ನು ವಾಸುದೇವನೊಂದಿಗೆ ನಿಶ್ಚಯಿಸಲಾಯಿತು.

ಮದುವೆ ಬಹಳ ವೈಭವದಿಂದ ನಡೆದು, ಎಲ್ಲಾ ಆಚರಣೆಗಳು ಮುಗಿದ ನಂತರ ಕಂಸನು ತನ್ನ ತಂಗಿಯನ್ನು ರಥದ ಮೂಲಕ ಅತ್ತೆಯ ಮನೆಗೆ ಕರೆದೊಯ್ಯುತ್ತಿದ್ದನು. ಈ ದಾರಿಯಲ್ಲಿ, ಇದ್ದಕ್ಕಿದ್ದಂತೆ ಜೋರಾಗಿ ಗಾಳಿ ಬೀಸಿ, ಮೋಡಗಳು ಆಕಾಶವನ್ನು ಆವರಿಸಿದವು.

ಆಗಸದಿಂದ ಒಂದು ಅನಾಮಿಕ ಧ್ವನಿಯು “ಓ ಕಂಸ, ನೀನು ತುಂಬಾ ಪ್ರೀತಿಸುವ ಸಹೋದರಿಗೆ ಮಗ ಹುಟ್ಟುತ್ತಾನೆ, ದೇವಕಿಗೆ ಜನಿಸಿದ ಎಂಟನೆಯ ಮಗನು ನಿನ್ನನ್ನು ಕೊಲ್ಲುತ್ತಾನೆ” ಎಂದು ಹೇಳಿತು. ಇದನ್ನು ಕೇಳಿದ ಕಂಸನು ಕೋಪಗೊಂಡು, ತನ್ನ ಸಹೋದರಿಯನ್ನೇ ಕೊಲ್ಲಲು ಮುಂದಾಗುತ್ತಾನೆ. ಆಗ ವಾಸುದೇವ ಕಂಸನನ್ನು ಬೇಡಿಕೊಂಡು, “ಸ್ವಂತ ಸಹೋದರಿಯನ್ನು ಕೊಲ್ಲುವುದು ನ್ಯಾಯಸಮ್ಮತವಲ್ಲ, ನಮಗೆ ಜನಿಸುವ ಎಲ್ಲಾ ಮಕ್ಕಳನ್ನು ನಿನಗೆ ಹಸ್ತಾಂತರಿಸುತ್ತೇವೆ” ಎಂದು ಭರವಸೆ ನೀಡಿದನು. ಕಂಸನು ವಾಸುದೇವ-ದೇವಕಿಯನ್ನು ಸೆರೆಮನೆಯಲ್ಲಿರಿಸಿದ.

ಕೃಷ್ಣನ ಜನನ ಮತ್ತು ಗೋಕುಲಕ್ಕೆ ಪ್ರಯಾಣ

ದೇವಕಿಗೆ ಜನಿಸಿದ ಮುಂದಿನ ಐದು ಮಕ್ಕಳನ್ನು ಕಂಸ ಕೊಂದನು. ದೇವಕಿ ಏಳನೇ ಬಾರಿ ಗರ್ಭಿಣಿಯಾಗಿದ್ದಳು. ಏಳನೆಯ ಮಗುವನ್ನು ಬುದ್ಧಿವಂತಿಕೆಯಿಂದ ರೋಹಿಣಿಗೆ ಹಸ್ತಾಂತರಿಸಿದರು, ಈ ಕ್ರೂರತೆಯಿಂದ ಬೇಸತ್ತ ದಂಪತಿಗಳು 8 ನೇ ಮಗುವನ್ನು ಉಳಿಸಲು ವಿಷ್ಣುವನ್ನು ಕೇಳಿಕೊಂಡರು. ಒಂದು ರಾತ್ರಿ ವಿಷ್ಣು ವಾಸುದೇವನಿಗೆ ಕನಸಿನಲ್ಲಿ ಕಾಣಿಸಿಕೊಂಡು, ನಿನ್ನ ಮಗುವನ್ನು ಗೋಕುಲಕ್ಕೆ ಕರೆದುಕೊಂಡು ಹೋಗಿ ಅಲ್ಲಿರುವ ನಂದಗೋಪಾಲ ಮತ್ತು ಯಶೋಧೆಗೆ ಜನಿಸಿದ ಮಗುವಿನ ಜೊತೆ ವಿನಿಮಯ ಮಾಡಿಕೊಳ್ಳಬೇಕು ಎಂದು ಹೇಳಿ ವಿಷ್ಣು ಕಣ್ಮರೆಯಾದ.

ಕೃಷ್ಣ ಪಕ್ಷದ ಅಷ್ಟಮಿಯ ದಿನ ದೇವಕಿಯ ಎಂಟನೇ ಮಗ ಹುಟ್ಟಿದ, ಆತನೇ ಭಗವಾನ್ ಕೃಷ್ಣ. ಕೃಷ್ಣನ ತಂದೆ ವಾಸುದೇವನು ವಿಷ್ಣುವಿನ ಸೂಚನೆಯಂತೆ, ಬುಟ್ಟಿಯಲ್ಲಿಟ್ಟುಕೊಂಡು ಭಾರೀ ಮಳೆಯಲ್ಲೇ ತನ್ನ ಕಂದನನ್ನು ಕಂಸನಿಂದ ರಕ್ಷಿಸಲು ನಂದಗೋಪಾಲ ಮನೆಗೆ ಹೊರಡುತ್ತಾನೆ. ಯಮುನಾ ನದಿಯ ಸಹಾಯದಿಂದ ಗೋಕುಲದಲ್ಲಿನ ತನ್ನ ಸ್ನೇಹಿತ ನಂದಗೋಪ ಇರುವಲ್ಲಿಗೆ ಕರೆತರುತ್ತಾನೆ. ಅದೇ ಸಮಯದಲ್ಲಿ ನಂದಾ ಅವರ ಪತ್ನಿ ಯಶೋಧಾ ಕೂಡ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಆಗ ವಾಸುದೇವನು ತನ್ನ ಮಗ ಕೃಷ್ಣನನ್ನು ಯಶೋಧಾಳ ಮಡಿಲಲ್ಲಿ ಮಲಗಿಸಿ, ಆಕೆಯ ಹೆಣ್ಣು ಮಗುವನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಾನೆ.

ಕಂಸನಿಗೆ ಎಚ್ಚರಿಕೆ ನೀಡಿದ ಮಾಯಾದೇವಿ

ವಾಸುದೇವನು ನಂದರ ಹೆಣ್ಣು ಶಿಶುವಿನೊಂದಿಗೆ ಮಥುರಾದ ಜೈಲಿಗೆ ಮರಳಿದರು. ನಂತರ ಕಂಸನಿಗೆ ದೇವಕಿ ಮತ್ತು ವಾಸುದೇವನಿಗೆ 8 ನೇ ಮಗುವಾಗಿರುವ ವಿಷಯ ತಿಳಿಯಿತು. ಕಂಸನು ಆ ಮಗುವನ್ನು ಸಾಯಿಸಲು ಜೈಲಿಗೆ ಬರುತ್ತಾನೆ. ಆ ಹೆಣ್ಣು ಶಿಶುವನ್ನು ಕಲ್ಲಿನ ಮೇಲಿಟ್ಟು ಕೊಲ್ಲಲು ಯತ್ನಿಸಿದಾಗ ಮಗು ಆಕಾಶಕ್ಕೆ ಹಾರಿ ತನ್ನ ದಿವ್ಯ ಸ್ವರೂಪವನ್ನು ಪ್ರದರ್ಶಿಸುತ್ತಾಳೆ. “ನಿನ್ನ ಕೊಲ್ಲುವವ ನಂದಗೋಕುಲದಲ್ಲಿ ಬೆಳೆಯುತ್ತಿದ್ದಾನೆ.” ಎನ್ನುವ ಕಿಚ್ಚನ್ನು ಹೊತ್ತಿಸಿಯೇ ಮಾಯವಾಯಿತು.

ಕಂಸನು ಕೃಷ್ಣನನ್ನು ಸಂಹರಿಸಲು ಕಳುಹಿಸಿದ ಉಳಿದ ಸಹವರ್ತಿಗಳೆಲ್ಲ, ಶ್ರೀ ಕೃಷ್ಣನಿಂದ ಸಾವನ್ನೇ ಸುತ್ತಿಕೊಂಡರು.

ಪೂತನಿ ಎಂಬ ರಾಕ್ಷಸಿಯನ್ನು ಕಳುಹಿಸಿ ನಂದಗೋಕುಲದ ಹಸುಳೆಗಳ ಪ್ರಾಣ ಹರಣವಾಗುವಂತೆ ಮಾಡಿದರೂ ಕೃಷ್ಣನನ್ನು ಏನೂ ಮಾಡಲಾಗಲಿಲ್ಲ. ಕೊನೆಗೆ ಮುಷ್ಟಿಯನ್ನೇ ಬಲವಾಗಿ ನಂಬಿದ ಕಂಸ ಬಿಲ್ಲು ಹಬ್ಬದ ನೆಪದಲ್ಲಿ ಅಳಿಯ ಕೃಷ್ಣನನ್ನು ಕೊನೆಗಾಣಿಸಲು ಕುಮ್ಮಕ್ಕು ನಡೆಸಿದನಾದರೂ ತಾನೇ ಕೊನೆಯನ್ನು ಕಂಡ ವ್ಯಾಖ್ಯಾನಕ್ಕೆ ನಾಂದಿ ಹಾಡಿದ.

ಶ್ರೀ ಕೃಷ್ಣನಿಗೆ ಪ್ರಿಯವಾದ ವಸ್ತುಗಳು ಮತ್ತು ಅವುಗಳ ಮಹತ್ವ

ಶ್ರಾವಣ/ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯನ್ನು ಗೋಕುಲಾಷ್ಟಮಿ ಎಂದು ದೇಶಾದ್ಯಂತ ಆಚರಿಸಲಾಗುತ್ತದೆ. ಕೃಷ್ಣನ ಜೀವನ ಹಾಗೂ ಆತನಿಗೆ ಪ್ರಿಯವಾದ ವಸ್ತುಗಳು ನಮಗೆ ಹಲವು ಸಂದೇಶಗಳನ್ನು ನೀಡುತ್ತವೆ:

  • ಕೊಳಲು (ಮುರಳಿ): ಶ್ರೀ ಕೃಷ್ಣನು ಕೊಳಲನ್ನು ತುಂಬಾ ಪ್ರೀತಿಸುತ್ತಿದ್ದನು. ನಮ್ಮ ಜೀವನವೂ ಕೊಳಲಿನಂತೆ ಮಧುರವಾಗಿರಬೇಕು, ಯಾವುದೇ ಪರಿಸ್ಥಿತಿಯಲ್ಲೂ ಸಂತೋಷವಾಗಿರಬೇಕು ಎಂಬ ಸಂದೇಶವನ್ನು ಇದು ನೀಡುತ್ತದೆ. ಹೀಗಾಗಿ ಆತನಿಗೆ “ಮುರಳೀಧರ” ಎಂಬ ಹೆಸರಿದೆ.
  • ನವಿಲು ಗರಿ: ನವಿಲು ಗರಿಯನ್ನು ಕೃಷ್ಣನು ತನ್ನ ಕಿರೀಟದಲ್ಲಿ ಇಟ್ಟುಕೊಳ್ಳುತ್ತಿದ್ದನು. ಇದು ಜೀವನದಲ್ಲಿ ತೊಂದರೆಗಳನ್ನು ಕಡಿಮೆ ಮಾಡಿ ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ.
  • ಬೆಣ್ಣೆ (ಮಖನ್): ಶ್ರೀ ಕೃಷ್ಣನು ಗೋಪಿಗಳಿಂದ ಬೆಣ್ಣೆಯನ್ನು ಕದಿಯುತ್ತಿದ್ದರಿಂದ ‘ಮಖನ್ ಚೋರ್’ ಎಂಬ ಹೆಸರು ಬಂದಿತು.
  • ಪಂಚಗವ್ಯ ಹಾಗೂ ಗೋಸೇವೆ: ಹಸುವಿನ ಹಾಲು, ಮೊಸರು, ಗೋಮೂತ್ರ, ತುಪ್ಪ ಮತ್ತು ಗೋಮಯ ಸೇರಿ ಪಂಚಗವ್ಯವಾಗುತ್ತದೆ. ಗೋಸೇವೆಯು ಸಮೃದ್ಧಿಯನ್ನು ನೀಡುತ್ತದೆ.
  • ಶಂಖ: ಸನಾತನ ಧರ್ಮದಲ್ಲಿ ಶಂಖವನ್ನು ಧಾರ್ಮಿಕ ಆಯೋಜನಗಳಲ್ಲಿ ವಿಶೇಷವೆಂದು ಪರಿಗಣಿಸಲಾಗಿದೆ. ಶಂಖವನ್ನು ಊದಿದಂತೆ ಅದು ವಾತಾವರಣದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹರಡುತ್ತದೆ. ಶಂಖ ಧ್ವನಿಯನ್ನು ಶುಭವೆಂದು ಪರಿಗಣಿಸಲಾಗಿದೆ. ಇದರ ಶಕ್ತಿ, ಪವಾಡಗಳು ಮಹಾಭಾರತ ಮತ್ತು ಪುರಾಣಗಳಲ್ಲಿಯೂ ಕಂಡು ಬರುತ್ತದೆ.

ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಮಹತ್ವ

ವಿಷ್ಣುಪುರಾಣ, ಮಹಾಭಾರತ, ಭಾಗವತ ಹಾಗೂ ಕಾವ್ಯಗಳಲ್ಲಿ ಶ್ರೀಕೃಷ್ಣನ ಮಹಿಮೆಯನ್ನು ಕಾಣಬಹುದು. ದುರಹಂಕಾರ ಮತ್ತು ಅಟ್ಟಹಾಸಗಳನ್ನು ಮೆಟ್ಟಿ ನಿಂತು, ಮನೋಬಲ ಹಾಗೂ ಇಂದ್ರಿಯ ನಿಗ್ರಹದಿಂದ ಜೀವನ ರೂಪಿಸಿಕೊಳ್ಳಬೇಕು ಎಂಬುದನ್ನು ಶ್ರೀ ಕೃಷ್ಣ ಪರಮಾತ್ಮ ತೋರಿಸಿಕೊಟ್ಟಿದ್ದಾನೆ. ಅಧರ್ಮ ಅತಿಯಾದಾಗ ಭಗವಂತನು ಇಳೆಗಿಳಿದು ದುಷ್ಟ ಶಿಕ್ಷಕ, ಶಿಷ್ಟ ರಕ್ಷಕನಾಗುತ್ತಾನೆ ಎಂಬುದೇ ಜನ್ಮಾಷ್ಟಮಿಯ ಮುಖ್ಯ ಸಂದೇಶ.

ಭಗವದ್ಗೀತೆಯ ಮುಖ್ಯ ಶ್ಲೋಕ ಮತ್ತು ಅರ್ಥ:

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |

ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ ||

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ |

ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ||

ಅರ್ಥ: ಯಾವಾಗ ಧರ್ಮದ ಅವನತಿಯಾಗಿ ಅಧರ್ಮದ ಉನ್ನತಿಯಾಗುತ್ತದೆಯೋ, ಆಗ ನಾನು ಅವತರಿಸುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ನಾನು ಜನ್ಮ ತಳೆಯುತ್ತೇನೆ.

ವಿಷ್ಣುವು ತನ್ನ ದಶಾವತಾರಗಳಾದ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಶ್ರೀ ರಾಮ, ಶ್ರೀ ಕೃಷ್ಣ, ಬುದ್ಧ ಮತ್ತು ಕಲ್ಕಿ ರೂಪಗಳಲ್ಲಿ ಧರ್ಮ ರಕ್ಷಣೆ ಮಾಡುತ್ತಾನೆ.

ಕೃಷ್ಣ ಜನ್ಮಾಷ್ಟಮಿಯ ದಿನ ಜಪಿಸಬೇಕಾದ ಮುಖ್ಯ ಮಂತ್ರಗಳು:

ಶ್ರೀಕೃಷ್ಣ ಮೂಲ ಮಂತ್ರ:

ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ |
ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ ||

ಶ್ರೀಕೃಷ್ಣ ಗಾಯತ್ರಿ ಮಂತ್ರ:

ಓಂ ದೇವಿಕಾನಂದನಾಯ ವಿದ್ಮಹೇ ವಾಸುದೇವಾಯ ಧೀಮಹಿ |
ತನ್ನೋ ಕೃಷ್ಣಃ ಪ್ರಚೋದಯಾತ್ ||

ಕಾರ್ಯಸಿದ್ಧಿ ಹಾಗೂ ಇಷ್ಟಾರ್ಥ ಪ್ರಾಪ್ತಿ ಮಂತ್ರ:

ಕೃಂ ಕೃಷ್ಣಾಯ ನಮಃ