ಹಾಸ್ಯ ಮತ್ತು ನಗು | Hasya Mathu Nagu ಬರೆದವರು : ರಾಮಕೃಷ್ಣ ಹೆಬ್ಬಾರ್
ನಗುವಿನ ಮೌಲ್ಯ ಮತ್ತು ಆರೋಗ್ಯದ ಬಾಂಧವ್ಯ
ನಗು ಮನುಷ್ಯನ ದೈನಂದಿನ ಜೀವನದಲ್ಲಿ ಅತ್ಯಂತ ಸಹಜವಾದ ಹಾಗೂ ಶಕ್ತಿಶಾಲಿ ಭಾವನೆ. ದಿನವೊಂದಕ್ಕೆ ಮನುಷ್ಯನು ಸರಾಸರಿ ಹದಿನೈದು ಬಾರಿ ನಗುತ್ತಾನೆಂದು ಸಂಶೋಧಕರು ಹೇಳಿದ್ದಾರೆ ! ನಗು ಮುಖದ ಸ್ವಾಗತ ಬಯಸದವರು ಯಾರು?
“ನಗುವ, ನಗಿಸುವ, ನಗಿಸಿ ಬಾಳುವ ವರವ, ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ” ಎಂದು ಡಿ.ವಿ.ಜಿಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ನಗುವಿನ ವರವನ್ನು ಬೇಡಿಕೊಳ್ಳಲು ಹೇಳಿದ್ದಾರೆ. ನಗುವು ಕೇವಲ ಮುಖದ ಭಾವನೆಯಲ್ಲ, ಬದಲಿಗೆ ಮಾನಸಿಕ ಹಾಗೂ ಶಾರೀರಿಕ ಆರೋಗ್ಯವನ್ನು ಕಾಯ್ದುಕೊಳ್ಳುವ ಅತ್ಯುತ್ತಮ ಟಾನಿಕ್ ಆಗಿದೆ. ಉತ್ತಮ ಆರೋಗ್ಯಕ್ಕೆ ಅತ್ಯುತ್ತಮ ಟಾನಿಕ್ ನಗುವೇ ಸರಿ!
ನಗುವಿನ ವಿಭಿನ್ನ ರೂಪಗಳು ಮತ್ತು ಹಾಸ್ಯ ಪ್ರಸಂಗಗಳು
ನಗು ಇನ್ನೊಬ್ಬರ ಜೀವನವನ್ನು ಸಂತೋಷಗೊಳಿಸುತ್ತದೆ. ಕೊಳ್ಳಲಾಗದ, ಕದಿಯಲಾಗದ, ತಯಾರಿಸಲಾಗದ – ಈ ನಗು ಎಲ್ಲಿಂದ ಬಂತು? ಎಂದರೆ ನಗುವು ದೇವನಿತ್ತ ಅದ್ಭುತ ವರ ಎಂದರೆ ಅತಿಶಯೋಕ್ತಿ ಅಲ್ಲ ! ಎಂತೆಂಥಾ ನಗುವವರಿದ್ದಾರೆ ಎಂದರೆ – ಎದ್ದು ಬಿದ್ದು ನಗು, ಮುಗುಳ್ನಗು, ಬಿಲ್ಲುಬಾಣದ ನಗು, ಚೀನೀ ನಗು, ಜಪಾನಿಸ್ ನಗು, ಪಕ್ಷಿ ರೀತಿ ನಗು, ಉಯ್ಯಾಲೆ ನಗು, ಸಿಂಹ ನಗು, ಬಲೂನ್ ನಗು, ದೇಶಾವರೀ ನಗು, ಹೀಗೆ 1, 2, 3 ನಕ್ಕರೆ – ಆಯುಷ್ಯ ನೂರು…!
ಬಡ ದಂಪತಿಗಳ ಪ್ರಸಂಗವು ಕಷ್ಟದ ಸನ್ನಿವೇಶದಲ್ಲೂ ಹಾಸ್ಯವನ್ನು ಹುಡುಕುವ ಮಾನವ ಸಹಜ ಗುಣವನ್ನು ತೋರಿಸುತ್ತದೆ. ಬಡವಿ ಹೆಣ್ಣೊಬ್ಬಳು ಪೇಟೆಯಲ್ಲಿ ಗಂಡನ ಜೊತೆ ಹೋಗುತ್ತಾ ಜ್ಯುವೆಲ್ಲರಿ ಶಾಪ್‌ನತ್ತ ಕೈ ತೋರಿ – “ನಗಬೇಕೂ” (ಆಭರಣ ಬೇಕು) ಎಂದಳಂತೆ. ಮೊದಲೇ ಬಡವ! ಕಿಸೆ ತೂತು! ಚಿನ್ನದ ಅಂಗಡಿಯತ್ತ ನೋಡಿ ನೋಡಿ – ಹೊಟ್ಟೆಗೆ – ಕೈ ಹಿಡಿದು ಜೋರಾಗಿ ಎದ್ದು ಬಿದ್ದು ನಕ್ಕನಂತೆ ! ಸ್ವಲ್ಪ ಹತ್ತಿರದಲ್ಲೇ ಖಾಕಿ ಆರಕ್ಷಕರೊಬ್ಬರು ಬರುವುದು ಕಂಡು ಪತಿ-ಪತ್ನಿಯರು ಬೇಗನೇ ಕವಲುದಾರಿ ಹಿಡಿದು ಮಾಯವಾದರಂತೆ!. ಈ ಘಟನೆ ಹಾಸ್ಯಮಯವಾದರೂ ವಾಸ್ತವದ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.
ನಗುವೇ ಇಲ್ಲದ ಜೀವನಕ್ಕೆ ಅರ್ಥವೇ ಇಲ್ಲ! “Face is the Index of Mind” ಮುಖವು ಮನಸ್ಸಿನ ಕನ್ನಡಿ!
ನಗು ಒಂದು ಔಷಧಿ
ಈ ನಗು ಎಂಬ ಔಷಧಿಯಿಂದ ಎಷ್ಟೋ ಮನೋರೋಗಗಳನ್ನು ಚಿಂತೆಗಳನ್ನು ಹೋಗಲಾಡಿಸಿ ನಗುವನ್ನು ಮುಖದಲ್ಲಿ ಕಾಣಬಹುದು. ಮನಸ್ಸು ತಿಳಿಯಾಗಿದ್ದರೆ ಮನುಷ್ಯ ಶಾಂತವಾಗಿಯೇ ಇರುತ್ತಾನೆ.
ನಕ್ಕು ನಲಿದು ನಗಿಸುವವರ ಬಳಿ ಎಲ್ಲರೂ ಸೇರುತ್ತಾರೆ. ಅಳುವವರ ಹತ್ತಿರ ಯಾರೂ ಸೇರುವುದಿಲ್ಲ. ನಗುವುದೇ ಸ್ವರ್ಗ, ಅಳುವುದೇ ನರಕ! ಕಷ್ಟ ಸುಖಗಳ ಸಮ್ಮಿಶ್ರಣವೇ ಜೀವನ; ಸುಖ ಇದ್ದಾಗ ಬೇಗ ಬೇಗ ದಿನಗಳುರುಳಿ ಹೋದಂತೆ ಅನಿಸುವುದು! ಆದರೆ ಕಷ್ಟ ಬಂದಾಗ ಒಂದೊಂದು ಕ್ಷಣವೂ ಯುಗವಾಗಿ ಪರಿಣಮಿಸುತ್ತದೆ.
ವಿವಿಧ ಮಾಧ್ಯಮಗಳು ಮತ್ತು ಹಾಸ್ಯ ಕಲೆ
ಪ್ರಾಚೀನ ಕಾಲದಿಂದಲೂ ಆಸ್ಥಾನಗಳಲ್ಲಿ ಹಾಸ್ಯಕ್ಕೆ ಆದ್ಯತೆ ಇತ್ತು. ತೆನಾಲಿರಾಮನ ಚತುರತೆ ಮತ್ತು ಹಾಸ್ಯ ಪ್ರಜ್ಞೆ ಸದಾ ಸ್ಮರಣೀಯ. ಕೃಷ್ಣದೇವರಾಯನ ಆಸ್ಥಾನದಲ್ಲಿ ನಕ್ಕುನಲಿಸುವ ತೆನಾಲಿರಾಮನ ಕತೆ ಯಾರಿಗೆ ತಾನೇ ತಿಳಿದಿಲ್ಲ! ಯಕ್ಷಗಾನ, ರಂಗಭೂಮಿಯ ಬಯಲಾಟಗಳಲ್ಲಿ ಹಾಸ್ಯಗಾರನ ಪ್ರವೇಶವು ಪ್ರೇಕ್ಷಕರನ್ನು ರಂಜಿಸುತ್ತದೆ. ಯಕ್ಷಗಾನ ಬಯಲಾಟಗಳಲ್ಲಿ ಹಾಸ್ಯಗಾರನ ಹಾಸ್ಯವೇನು ಕಡಿಮೆಯೇ? “ಆಲಿಸಬೇಕು ಜೀಯಾ! ಮಹಾ ಪ್ರಭುಗಳೇ ನಾನು ಅರಮನೆಯ ಕಾವಲಿಯಲ್ಲಿದ್ದಾಗ ವಿರೋಧಿರಾಜನ ಸೈನಿಕರು ಬಂದು ಒಳಗೆ ನುಗ್ಗಲು ನೋಡಿದರು. ನನಗೆ ಚೆನ್ನಾಗಿ ಬಾರಿಸಿದರು! ನಾನೂ ಬಿಡಲಿಲ್ಲ – ಹೊಡೆದೆ ! (ಬೊಬ್ಬೆ ಹೊಡೆದೆ!” ಎಂದು ಮೆಲ್ಲನೆ ನುಡಿದು ಸುಮ್ಮನಾಗುತ್ತಾನೆ!) ಇದರಿಂದ ಸಭೆಯಿಡೀ ನಕ್ಕು ನಲಿಯುತ್ತದೆ.
ಸರ್ಕಸ್‌ನಲ್ಲಿ ಜೋಕರ್ ನಗಿಸುತ್ತಾನೆ! ಪತ್ರಿಕೆಗಳಲ್ಲಿ ವ್ಯಂಗ್ಯ ಚಿತ್ರಗಳಿಂದ ಚಿತ್ರ ಕಲಾವಿದರೂ ನಗಿಸುತ್ತಾರೆ! ಹೀಗೆ ಧ್ವನಿ ಇದ್ದವರು ಅತ್ತರೂ ಚಂದ; ನಕ್ಕರೂ ಚಂದ! ಅಳುವುದೂ ಮುಖವೇ – ನಗುವುದು ಮುಖವೇ! “ನಗು” ನೀನು ಹುಚ್ಚ! ಎಂದು ಹೇಳುವವರೂ ಇದ್ದಾರೆ. “ಅಳು”, “ನೀನು ಮಗು!” ಎಂದು ಹೇಳುತ್ತಾರೆ. (Weep you are called a baby, Laugh! You are called a fool !)
ಚಾರ್ಲಿ ಚಾಪ್ಲಿನ್, ಮಿಸ್ಟರ್ ಬೀನ್ ಇವರ ಅಭಿನಯ ಹಾಗೂ ಮುಖವನ್ನು ನೋಡಿದರೇ ಸಾಕು, ನಗೆ ಬಾರದವರಿಲ್ಲ! ಹಾಗೆಯೇ ಹಾಸ್ಯನಟ – ನರಸಿಂಹರಾಜು, ದ್ವಾರಕೀಶ್ ಇವರೆಲ್ಲಾ ಚಿತ್ರರಂಗದಲ್ಲಿನ ಹಾಸ್ಯ ನಟರನ್ನೆಲ್ಲಾ ಮರೆಯುವಂತಹುದಲ್ಲ!
ಆಧುನಿಕ ಕಾಲಘಟ್ಟದಲ್ಲಿ ಹಾಸ್ಯ ಮತ್ತು ನಗು
ಇಂದಿನ ಇಂಟರ್ನೆಟ್ ಯುಗದಲ್ಲಿ ಸೋಶಿಯಲ್ ಮೀಡಿಯಾಗಳಾದ ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳಲ್ಲಿ ಕಿರು ವೀಡಿಯೊಗಳು (Reels) ಮತ್ತು ತಮಾಷೆಯ ಕಂಟೆಂಟ್ ಮಾಡುವ ಮೂಲಕ ಪ್ರತಿಯೊಬ್ಬರೂ ಮನೋರಂಜನೆ ಪಡೆಯುತ್ತಿದ್ದಾರೆ.
ನಗುವು ಸ್ವರ್ಗಕ್ಕೆ ಸಮಾನ, ಅಳುವ ಅಥವಾ ಚಿಂತಿಸುವ ಸ್ಥಿತಿ ನರಕಕ್ಕೆ ಸಮಾನ. ಇನ್ನೊಬ್ಬರನ್ನು ಅಪಹಾಸ್ಯ ಮಾಡದೆ, ಎಲ್ಲರೊಂದಿಗೆ ನಕ್ಕು ನಗಿಸುತ್ತಾ ಬಾಳುವುದು ನಿಜವಾದ ಜೀವನದ ಸಾರ್ಥಕತೆ. ಹೀಗೆ ನಗುತ್ತ ಇರಿ ! ಅಪಹಾಸ್ಯ ಮಾಡದಿರಿ! ಹೀಗಿದ್ದಲ್ಲಿ ನಗುವುದೇ ಸ್ವರ್ಗ!
