‘ನಿಮ್ಮ ಕನಸಿನ ಭೂಮಿ’ (Nimma Kanasina Bhoomi) ಗೇಮ್ ಮೂಲಕ ನಿಮ್ಮ ಇಷ್ಟದ ಕೃಷಿ ಭೂಮಿಯಲ್ಲಿ ಮರ, ನದಿ, ರಸ್ತೆ, ಬಿಲ್ಡಿಂಗ್ ಹಾಗೂ ಜೆಸಿಬಿಗಳನ್ನು ಬಳಸಿ ಸುಂದರವಾದ ದೃಶ್ಯಗಳನ್ನು ರಚಿಸಿ ಫಲಿತಾಂಶ ನೋಡಿ.
ಪ್ರತಿಯೊಬ್ಬರಿಗೂ ಬದುಕಿನಲ್ಲಿ ಕೆಲವು ಕನಸುಗಳಿರುತ್ತವೆ—ಹಣ ಮಾಡಬೇಕು, ಸ್ವಂತ ಮನೆ ಕಟ್ಟಬೇಕು, ಶ್ರೀಮಂತರಾಗಬೇಕು ಎಂಬ ಆಸೆಗಳು ಎಲ್ಲರಲ್ಲೂ ಸಹಜ. ಆದರೆ ಕಾಲದ ಬದಲಾವಣೆ ಹಾಗೂ ಸಂದರ್ಭಗಳ ಒತ್ತಡದಿಂದ ಎಲ್ಲರಿಗೂ ಅವು ಈಡೇರುತ್ತವೆ ಎಂದಿಲ್ಲ. ಹಣ ಮಾಡುವ ಧಾವಂತದಲ್ಲಿ ತಮ್ಮ ನೆಲೆ, ಜಾಗವನ್ನೇ ಕಳೆದುಕೊಂಡವರೂ ಇದ್ದಾರೆ. ಇಂದಿನ ಸ್ಪರ್ಧಾತ್ಮಕ ಮತ್ತು ವ್ಯವಹಾರಿಕ ಬದುಕು ತುಂಬಾ ಕಷ್ಟಕರವಾಗಿದೆ. ಯುವಕರು ಸೂಕ್ತ ಉದ್ಯೋಗವಿಲ್ಲದೆ ಬದುಕನ್ನು ಸಾಗಿಸುತ್ತಿದ್ದು, ನಿರ್ದಿಷ್ಟ ಗುರಿಯಿಲ್ಲದೆ ಪರದಾಡುವಂತಾಗಿದೆ.
ಕೆಲವೊಮ್ಮೆ ಆರ್ಥಿಕವಾಗಿ ಸದೃಢರಾದವರು ತಮ್ಮ ಕನಸನ್ನು ನನಸು ಮಾಡಲು ಕೃಷಿ ಭೂಮಿಯನ್ನು ಖರೀದಿಸಿ ದೊಡ್ಡ ಪ್ರಮಾಣದ ವ್ಯವಹಾರಗಳಿಗೆ ಮುಂದಾಗುತ್ತಾರೆ. ಅಲ್ಲಿ ಯಶಸ್ಸು ಸಿಕ್ಕಿದ ಕೂಡಲೇ ಮತ್ತೊಂದು ಜಾಗವನ್ನು ಕೊಂಡು ಅಲ್ಲಿಯೂ ವ್ಯವಹಾರ ವಿಸ್ತರಿಸುತ್ತಾರೆ. ಒಬ್ಬರು ಮಾಡಿದ್ದನ್ನು ನೋಡಿ ಮತ್ತೊಬ್ಬರು ಅನುಕರಿಸುತ್ತಾ ಹೋಗುತ್ತಾರೆ. ಆದರೆ, ಈ ಆಸೆ ಯಾವಾಗ ದುರಾಸೆಯಾಗಿ ಬದಲಾಗುತ್ತದೆಯೋ, ಆಗ ಮನುಷ್ಯನ ಪತನ ಆರಂಭವಾಗುತ್ತದೆ.
ಈ ಭೂಮಿ ನಮಗೆ ನೀರು, ಅನ್ನ, ಫಲವತ್ತಾದ ಮಣ್ಣು ಹಾಗೂ ಪ್ರಕೃತಿಯ ಸೌಂದರ್ಯವನ್ನು ನೀಡಿದೆ. ಆದರೆ ಮನುಷ್ಯ ಮಾತ್ರ ಸ್ವಾರ್ಥಿಯಾಗುತ್ತಾ ಸಾಗಿದ್ದಾನೆ. ಇಲ್ಲಿ ಇತರ ಜೀವಸಂಕುಲಗಳೂ ಇವೆ ಎಂಬುದನ್ನು ಮರೆತು, ಮರಗಳನ್ನು ಕಡಿದು, ಕಾಡುಗಳನ್ನು ನಾಶಮಾಡಿ, ಆ ಜಾಗದಲ್ಲಿ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಿ ವ್ಯಾಪಾರ ಮಾಡುತ್ತಿದ್ದಾನೆ. ಹಣದ ದುರಹಂಕಾರದ ಮುಂದೆ ಸುತ್ತಮುತ್ತಲಿನ ಪರಿಸರ ಅವನಿಗೆ ಕಾಣದಂತಾಗಿದೆ. ಮುಂದೊಂದು ದಿನ ದೊಡ್ಡ ಕಷ್ಟ ಎದುರಾದಾಗ, ಯಾರಿಂದಲೂ ಪರಿಹರಿಸಲಾಗದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಇಡೀ ಸಮಾಜವೇ ನಾಶವಾಗುವ ಆತಂಕ ಎದುರಾಗಿದೆ.
ಇಂದಿನ ವಾತಾವರಣವನ್ನು ಒಮ್ಮೆ ಗಮನಿಸಿ: ಸೂರ್ಯನ ಬಿಸಿಲು ವಿಪರೀತವಾಗಿದೆ, ಕುಡಿಯುವ ನೀರಿನ ಅಭಾವ ಕಾಡುತ್ತಿದೆ, ಗದ್ದೆಗಳಲ್ಲಿ ಸಕಾಲಕ್ಕೆ ಬೆಳೆಗಳು ಬಾರದೆ ರೈತರು ಪರದಾಡುತ್ತಿದ್ದಾರೆ. ಎಲ್ಲಿ ನೋಡಿದರೂ ಕಾಂಕ್ರೀಟ್ ಕಾಡುಗಳು, ಕಾರ್ಖಾನೆಗಳ ರಾಸಾಯನಿಕ ಹೊಗೆ, ವಾಹನಗಳ ಹಾಗೂ ಯಂತ್ರಗಳ ಶಬ್ದ ಮಾಲಿನ್ಯ, ಜಲ ಮೂಲಗಳಲ್ಲಿ ತ್ಯಾಜ್ಯದ ರಾಶಿ ತುಂಬಿಕೊಂಡಿದೆ. ಹೀಗೆ ನಿಸರ್ಗದೊಂದಿಗೆ ಚೆಲ್ಲಾಟವಾಡಿ ಮನುಷ್ಯನೇ ವಿಷಭರಿತ ವಾತಾವರಣವನ್ನು ಸೃಷ್ಟಿಸಿಕೊಂಡಿದ್ದಾನೆ.
ಇದನ್ನೆಲ್ಲಾ ಸರಿಪಡಿಸಲು ಮತ್ತೊಂದು ಯುಗವೇ ಬರಬೇಕೇ? ಸದ್ಯ ನಾವಿರುವ ಜಾಗದಲ್ಲೇ ಸಾಧ್ಯವಾದಷ್ಟು ಮರ-ಗಿಡಗಳನ್ನು ನೆಟ್ಟು, ಪ್ರಕೃತಿಯ ಮಹತ್ವವನ್ನು ಮರೆತಿರುವ ಇಂದಿನ ಪೀಳಿಗೆಗೆ ತಿಳಿಹೇಳಿ ಬದಲಾವಣೆ ತರುವ ಪ್ರಯತ್ನ ಮಾಡಿದರೆ, ನಮ್ಮ ಮುಂದಿನ ವಾತಾವರಣ ಸ್ವಲ್ಪ ಮಟ್ಟಿಗಾದರೂ ಉಸಿರಾಡಲು ಯೋಗ್ಯವಾಗಬಹುದು.
ನಿಮ್ಮ ಕನಸಿನ ಭೂಮಿ
ಈ ನಿಟ್ಟಿನಲ್ಲಿ, ಪ್ರಕೃತಿಯ ಮೌಲ್ಯವನ್ನು ತಿಳಿಯುತ್ತಲೇ ನಿಮ್ಮ ಕಲ್ಪನೆಯ ಸುಂದರ ಪರಿಸರವನ್ನು ರೂಪಿಸಲು ಇಲ್ಲೊಂದು ಅವಕಾಶವಿದೆ. ಇಲ್ಲಿ ಅನಿಮೇಟೆಡ್ ಕೃಷಿ ಭೂಮಿ ದೃಶ್ಯ ಇದೆ. ‘ನಿಮ್ಮ ಕನಸಿನ ಭೂಮಿ’ ಗೇಮ್ ಮೂಲಕ ನಿಮ್ಮ ಇಷ್ಟದ ಕೃಷಿ ಭೂಮಿಯಲ್ಲಿ ಮರ, ನದಿ, ರಸ್ತೆ, ಬಿಲ್ಡಿಂಗ್ ಹಾಗೂ ಜೆಸಿಬಿಗಳನ್ನು ಬಳಸಿ ಸುಂದರವಾದ ದೃಶ್ಯಗಳನ್ನು ರಚಿಸಿ, ಆಮೇಲೆ ದೃಶ್ಯ ಪೂರ್ಣ ಆದಮೇಲೆ ಅದರ ಫಲಿತಾಂಶವನ್ನು ನೀವೇ ಅನುಭವಿಸಿ!
