Save Water, Save Life
ನೀರನ್ನು ಉಳಿಸಿ, ಜೀವನವನ್ನು ಉಳಿಸಿ
ಜೀವಕ್ಕೆ ಮೂಲ ಎಂದರೆ ನೀರು. ನೀರು ಪ್ರಕೃತಿಯ ಸಂಪತ್ತು ಕೂಡ ಹೌದು. ಜೀವಿಗಳು ಬದುಕಲು ಅತ್ಯಂತ ಅಗತ್ಯವಾದ ಸಂಪನ್ಮೂಲಗಳಲ್ಲಿ ನೀರು ಪ್ರಮುಖವಾದುದು. ಆದರೆ ಇಂದಿನ ದಿನಗಳಲ್ಲಿ ನೀರಿನ ಕೊರತೆ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಜನಸಂಖ್ಯೆ ಹೆಚ್ಚಳ, ನಗರೀಕರಣ, ಅತಿಯಾಗಿ ನೀರಿನ ಬಳಕೆ ಮತ್ತು ಹವಾಮಾನ ಬದಲಾವಣೆಯಿಂದ, ಗಿಡ ಮರಗಳ ನಾಶದಿಂದ ವಾತಾವರಣದಲ್ಲಿ ತಾಪ ಮಾನ ಹೆಚ್ಚಾಗಿ, ಅಂತರ್ಜಲ ಮಟ್ಟ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ನೀರನ್ನು ಮಿತವಾಗಿ ಬಳಸುವುದು ಮತ್ತು ಉಳಿಸುವುದು ನಮ್ಮ ಪ್ರತಿಯೊಬ್ಬರ ಜವಾಬ್ದಾರಿ.
ನೀರಿನ ಮಹತ್ವ
ನೀರಿಲ್ಲದೆ ಜೀವವಿಲ್ಲ ಎಂಬುದು ನಮಗೆ ತಿಳಿದ ವಿಚಾರ. ಕುಡಿಯಲು, ಅಡುಗೆ ಮಾಡಲು, ಕೃಷಿಗೆ, ಕೈಗಾರಿಕೆಗಳಿಗೆ—ಪ್ರತಿ ಕ್ಷೇತ್ರದಲ್ಲಿಯೂ ನೀರಿನ ಅವಶ್ಯಕತೆ ಇದೆ. ನಮ್ಮ ದೇಹದ ಸುಮಾರು 60% ಭಾಗ ನೀರಿನಿಂದ ಕೂಡಿದೆ. ಇದು ನಮ್ಮ ಆರೋಗ್ಯವನ್ನು ಕಾಪಾಡಲು, ದೇಹದ ತಾಪಮಾನವನ್ನು ನಿಯಂತ್ರಿಸಲು ಮತ್ತು ದೇಹದ ಅಂಗಾಂಗಗಳ ಸರಿಯಾದ ಕಾರ್ಯಾಚರಣೆಗೆ ಸಹಾಯ ಮಾಡುತ್ತದೆ.
ನೀರಿನ ಕೊರತೆಯ ಕಾರಣಗಳು
ಇಂದಿನ ಕಾಲದಲ್ಲಿ ನೀರಿನ ಕೊರತೆ ಏಕೆ ಉಂಟಾಗುತ್ತಿದೆ ಎಂಬುದನ್ನು ಗಮನಿಸೋಣ:
- ಅತಿಯಾದ ನೀರಿನ ಬಳಕೆ
- ಮಳೆ ನೀರಿನ ಸರಿಯಾದ ಸಂಗ್ರಹಣೆ ಇಲ್ಲದಿರುವುದು
- ಕಾಡು ನಾಶ (ಅರಣ್ಯ ನಾಶ)
- ಭೂಗರ್ಭದ ನೀರನ್ನು ಅತಿಯಾಗಿ ಬಳಕೆ ಮಾಡುವುದು
- ನದಿಗಳು ಮತ್ತು ಕೆರೆಗಳ ಮಾಲಿನ್ಯ
ಈ ಎಲ್ಲ ಕಾರಣಗಳಿಂದಾಗಿ ಭವಿಷ್ಯದಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ.
ನೀರನ್ನು ಉಳಿಸುವ ಅಗತ್ಯತೆ
ನೀರು ಸೀಮಿತವಾದ ನೈಸರ್ಗಿಕ ಸಂಪನ್ಮೂಲವಾಗಿದೆ. ಭೂಮಿಯ ಮೇಲಿನ ಹೆಚ್ಚಿನ ನೀರು ಉಪ್ಪುನೀರು (ಸಮುದ್ರ), ಮತ್ತು ಉಳಿದ ನೀರು ಮಂಜುಗಡ್ಡೆ ಅಥವಾ ಅಂತರ್ಜಲ ರೂಪದಲ್ಲಿದೆ. ಮನುಷ್ಯನ ಬಳಕೆಗೆ ಲಭ್ಯವಿರುವ ಸಿಹಿ ನೀರು ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ನಾವು ಇದನ್ನು ಮಿತವಾಗಿ ಬಳಸದಿದ್ದರೆ ಮುಂದಿನ ಪೀಳಿಗೆಗಳಿಗೆ ನೀರು ಸಿಗದೆ ಹೋಗಬಹುದು. ಆದ್ದರಿಂದ, ಈಗಲೇ ಕ್ರಮ ತೆಗೆದುಕೊಳ್ಳುವುದು ಅತ್ಯಂತ ಮುಖ್ಯ.
ನೀರು ಉಳಿಸುವುದರಿಂದ:
- ಭವಿಷ್ಯದ ಪೀಳಿಗೆಗಳಿಗೆ ನೀರು ಉಳಿಯುತ್ತದೆ
- ಪರಿಸರ ಸಮತೋಲನ ಕಾಪಾಡಬಹುದು
- ಕೃಷಿ ಮತ್ತು ಆಹಾರ ಉತ್ಪಾದನೆ ಸುಧಾರಿಸುತ್ತದೆ
- ನೀರಿನ ಕೊರತೆಯಿಂದ ಉಂಟಾಗುವ ಸಮಸ್ಯೆಗಳು ಕಡಿಮೆಯಾಗುತ್ತವೆ
- ಮನೆಯಲ್ಲೇ ನೀರನ್ನು ಉಳಿಸುವ ಸರಳ ವಿಧಾನಗಳು
ನಾವು ಜೀವನದಲ್ಲಿ ದಿನನಿತ್ಯದ ಕೆಲವು ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ನೀರನ್ನು ಉಳಿಸಬಹುದು:
1. ಟ್ಯಾಪ್ಗಳನ್ನು ಸರಿಯಾಗಿ ಮುಚ್ಚಿ
ಟ್ಯಾಪ್ಗಳಿಂದ ನೀರು ಹನಿ ಹನಿಯಾಗಿ ಕಾರುತ್ತಿದ್ದರೆ ಅದು ದೊಡ್ಡ ಪ್ರಮಾಣದ ನೀರಿನ ವ್ಯರ್ಥತೆಗೆ ಕಾರಣವಾಗುತ್ತದೆ. ಕೆಲವರು ಕೈ ತೊಳೆಯುವಾಗ, ಹಲ್ಲುಜ್ಜುವಾಗ ಟ್ಯಾಪ್ ನಿಂದ ನೀರು ಬಿಟ್ಟು ವ್ಯರ್ಥ ಮಾಡುತ್ತಾರೆ. ಬೇಕಾದಾಗ ಮಾತ್ರ ನೀರನ್ನು ಬಳಸದೆ ಸುಮ್ಮನೆ ನೀರು ವ್ಯರ್ಥವಾಗುತ್ತಿರುತ್ತದೆ. ಚಿಕ್ಕ ಮಕ್ಕಳಿಗೆ ನಾವು ನೀರಿನ ಮಹತ್ವ ತಿಳಿಸಿ ಹೇಳಿದರೆ ಅವರು ಮುಂದೆ ಎಚ್ಚೆತ್ತುಕೊಂಡು ಜವಾಬ್ದಾರಿಯಿಂದ ನಿಭಾಯಿಸುತ್ತಾರೆ.
2. ಬಕೆಟ್ ಬಳಸಿ ಸ್ನಾನ ಮಾಡಿ
ದೊಡ್ಡ ನಗರಗಳಲ್ಲಿ ಮನೆಗಳಲ್ಲಿ ಶವರ್ ಬಳಸುವುದು ಜಾಸ್ತಿ. ಶವರ್ ಬಳಸುವುದರಿಂದ ಹೆಚ್ಚಾಗಿ ನೀರು ವ್ಯರ್ಥವಾಗುತ್ತದೆ. ಶವರ್ನ ಬದಲು ಬಕೆಟ್ ಬಳಸಿ ಸ್ನಾನ ಮಾಡಿದರೆ ಹೆಚ್ಚು ನೀರನ್ನು ಉಳಿಸಬಹುದು.
3. ಮಳೆ ನೀರು ಸಂಗ್ರಹಣೆ
ಮನೆಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಿ ಉಪಯೋಗಿಸುವುದು ಉತ್ತಮ ವಿಧಾನ. ಅಂದರೆ ಮನೆಯ ಮೇಲ್ಛಾವಣಿಯ ಮೇಲೆ ಬೀಳುವ ನೀರನ್ನು ಪೈಪ್ಗಳ ಮೂಲಕ ಶೋಧಿಸಿ ಸಂಗ್ರಹಿಸುವುದು. ಮಳೆನೀರನ್ನು ಗುಂಡಿಗಳ ಮೂಲಕ ಭೂಮಿಯೊಳಗೆ ಇಂಗಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು. ಇದರಿಂದ ಕುಡಿಯುವ ನೀರು, ತೋಟಗಾರಿಕೆ, ಮತ್ತು ದೈನಂದಿನ ಬಳಕೆಗಾಗಿ ನೀರು ಲಭ್ಯವಾಗುತ್ತದೆ.
4. ವಾಹನ ತೊಳೆಯಲು ಪೈಪ್ ಬಳಸಬೇಡಿ
ವಾಹನ ತೊಳೆಯಲು ಪೈಪ್ ಬಳಸುತ್ತಾರೆ. ಪೈಪ್ ನಿಂದ ನೀರು ತುಂಬಾ ರಭಸದಿಂದ ಬರುವುದರಿಂದ, ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಷ್ಟವಾಗುತ್ತದೆ. ಇದಕ್ಕಾಗಿ ಬಕೆಟ್ ಮತ್ತು ಬಟ್ಟೆ ಬಳಸಿ ವಾಹನ ತೊಳೆಯಿರಿ.
5. ಗಿಡಗಳಿಗೆ ಸರಿಯಾದ ಸಮಯದಲ್ಲಿ ನೀರು ಹಾಕಿ
ಕೆಲವರು ಗಿಡಗಳಿಗೆ ಮಧ್ಯಾಹ್ನ ನೀರು ಹಾಕುತ್ತಾರೆ, ಗಿಡಗಳಿಗೆ ನೀರು ಹಾಕಲು ಅದಕ್ಕೊಂದು ಸಮಯವಿರುತ್ತದೆ. ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ನೀರು ಹಾಕಿದರೆ ನೀರು ಆವಿಯಾಗುವುದನ್ನು ತಪ್ಪಿಸಬಹುದು.
ಕೃಷಿಯಲ್ಲಿ ನೀರಿನ ಸಂರಕ್ಷಣೆ
ಕೃಷಿಯಲ್ಲಿ ನೀರಿನ ಬಳಕೆ ಹೆಚ್ಚು. ಆದ್ದರಿಂದ, ಕೃಷಿಯಲ್ಲಿ ನೀರನ್ನು ಉಳಿಸುವ ಕ್ರಮಗಳು ಮುಖ್ಯ:
- ಹನಿ ನೀರಾವರಿ (Drip irrigation) ಬಳಕೆ ಮತ್ತು ಸ್ಪ್ರಿಂಕ್ಲರ್ ವ್ಯವಸ್ಥೆಯಿಂದ ನೀರಿನ ನಷ್ಟವನ್ನು ತಡೆಯಬಹುದು.
- ನೀರು ಉಳಿಸುವ ಬೆಳೆಗಳನ್ನು ಬೆಳೆಯುವುದು. ಅಂದರೆ ಕಡಿಮೆ ನೀರಿನಿಂದ ಆಗುವ ಬೆಳೆ (ಉದಾ: ರಾಗಿ, ಜೋಳ)
- ಭೂಮಿಯನ್ನು ಸಮತಟ್ಟಾಗಿಸುವುದರಿಂದ ನೀರು ವ್ಯರ್ಥವಾಗುವುದಿಲ್ಲ.
- ಮಣ್ಣಿನ ತೇವಾಂಶ ಉಳಿಸಲು ಒಣಗಿದ ಎಲೆಗಳನ್ನು ಮಣ್ಣಿನ ಮೇಲೆ ಹೊದಿಸುವುದರಿಂದ ಆವಿಯಾಗುವಿಕೆ ಕಡಿಮೆಯಾಗಿ ಮಣ್ಣಿನಲ್ಲಿ ತೇವಾಂಶ ಉಳಿಯುತ್ತದೆ.
ಪ್ರಾಣಿ – ಪಕ್ಷಿಗಳಿಗೂ ಪಾಲಿರಲಿ
ಪ್ರತಿಯೊಬ್ಬರೂ ಪ್ರಕೃತಿಯನ್ನು ಪ್ರೀತಿಸಬೇಕು. ಪ್ರಕೃತಿಯಿಂದ ನಾವೆಲ್ಲರೂ ಇರುವುದು. ಪ್ರಕೃತಿ ಸಮತೋಲನ ನಿಭಾಯಿಸಿದಾಗ ಮಾತ್ರ ಪ್ರಾಣಿ ಪಕ್ಷಿ ಮಾನವ ಬದುಕಲು ಸಾಧ್ಯ. ಮೂಕ ಪ್ರಾಣಿಗಳೆಂದು ಕರೆಸಿಕೊಳ್ಳುವ ಪ್ರಾಣಿ, ಪಕ್ಷಿಗಳಿಗೆ ಮಾನವನ ನೆರವು ತುಂಬಾ ಅತ್ಯಗತ್ಯ. ಕಾಡಿನಲ್ಲಿರುವ ಹಳ್ಳ, ಕೆರೆ, ಜಲಪಾತದ ನೀರು ಬತ್ತುತ್ತಿದ್ದಂತೆ ಪ್ರಾಣಿ ಪಕ್ಷಿಗಳು ನೀರಿಗಾಗಿ ನಾಡಿಗಿಳಿಯುವುದು ಸಾಮಾನ್ಯ. ಬೇಸಿಗೆಯಲ್ಲಿ ಕುಡಿಯುವ ನೀರಿಲ್ಲದೆ ಪ್ರಾಣಿ-ಪಕ್ಷಿಗಳು ಕಷ್ಟ ಪಡುತ್ತದೆ, ಸಾಯುತ್ತವೆ. ಚಳಿಗಾಲದಲ್ಲೂ ಕೂಡ ಹೆಪ್ಪುಗಟ್ಟಿದ ನೀರಿನಿಂದಾಗಿ ಪಕ್ಷಿಗಳಿಗೆ ನೀರು ಸರಿಯಾಗಿ ಸಿಗುವುದಿಲ್ಲ, ಆ ಸಮಯದಲ್ಲಿಯೂ ಕುಡಿಯುವ ನೀರನ್ನು ನೀಡುವುದು ಮುಖ್ಯವಾಗಿದೆ.
ನೀರಿಗಾಗಿ ಕಾಡಿನಿಂದ ನಾಡಿಗೆ ಬರುವ ಮೂಕಪ್ರಾಣಿಗಳ ಬಾಯಾರಿಕೆಯ ದಾಹವನ್ನು ನೀಗಿಸುವುದು ನಮ್ಮ ಕರ್ತವ್ಯವಾಗಿದೆ. ಮನೆಯ ತಾರಸಿಯಲ್ಲಿ ಪಕ್ಷಿಗಳಿಗೆ ಸುಲಭವಾಗಿ ನೀರು ಲಭ್ಯವಾಗುವಂತೆ ಟ್ರೇಗಳಲ್ಲಿ ನೀರನ್ನು ತುಂಬಿಸಿಡುವುದು, ಮನೆಯಂಗಳದಲ್ಲಿ ಪಾತ್ರೆಗಳಲ್ಲಿ ನೀರನ್ನು ತುಂಬಿಸಿ ಇಡುವುದು, ಅಂಗಡಿ ಮುಂಭಾಗಗಳಲ್ಲಿ, ನಗರಗಳ ರಸ್ತೆ ಬದಿಯಲ್ಲಿ, ಪಾತ್ರೆ, ತೆಂಗಿನ ಗೆರಟೆಗಳಲ್ಲಿ, ಮಣ್ಣಿನ ಪಾತ್ರೆಯಲ್ಲಿ ನೀರು ಇಡುವುದು ಮುಂತಾದ ಕೆಲಸಗಳನ್ನು ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿನಿತ್ಯ ಆಗಮಿಸುವ ಪಕ್ಷಿಗಳು ನೀರ ದಾಹದಿಂದ ಸಾಯುವ ಪ್ರಮಾಣವು ತಪ್ಪುತ್ತದೆ.
ಸಮಾಜದ ಜವಾಬ್ದಾರಿ
ನೀರು ಉಳಿಸುವುದು ಕೇವಲ ವ್ಯಕ್ತಿಯ ಜವಾಬ್ದಾರಿ ಮಾತ್ರವಲ್ಲ, ಸಮಾಜದ ಜವಾಬ್ದಾರಿಯೂ ಹೌದು. ಶಾಲೆಗಳು, ಕಾಲೇಜುಗಳು, ಸಂಸ್ಥೆಗಳು ನೀರಿನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಸರ್ಕಾರವೂ ಕೂಡ ಕೆರೆಗಳ ಪುನರುಜ್ಜೀವನ, ಮಳೆ ನೀರಿನ ಸಂಗ್ರಹಣೆ ಯೋಜನೆಗಳನ್ನು ಉತ್ತೇಜಿಸಬೇಕು.
ನಾಳೆಯ ಭವಿಷ್ಯ ನಮ್ಮಲ್ಲೇ ಇದೆ!
ನೀರು ನಮ್ಮ ಬದುಕಿನ ಅಮೂಲ್ಯ ಸಂಪತ್ತು. ಪ್ರತಿ ಹನಿ ನೀರು ಅಮೂಲ್ಯವಾಗಿದೆ, ಇದನ್ನು ವ್ಯರ್ಥ ಮಾಡದೇ ಮಿತವಾಗಿ ಬಳಸುವುದು ನಮ್ಮ ಕರ್ತವ್ಯ. ಇಂದು ನಾವು ತೆಗೆದುಕೊಳ್ಳುವ ಸಣ್ಣ ಹೆಜ್ಜೆಗಳು ನಾಳೆಯ ಭವಿಷ್ಯವನ್ನು ಸುರಕ್ಷಿತವಾಗಿಸುತ್ತದೆ.
“ನೀರನ್ನು ಉಳಿಸಿ, ಜೀವನವನ್ನು ಉಳಿಸಿ” ಎಂಬ ಸಂದೇಶವನ್ನು ನಾವು ಎಲ್ಲರೂ ಅನುಸರಿಸಬೇಕು. ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಂಡರೆ ನೀರಿನ ಕೊರತೆಯನ್ನು ಕಡಿಮೆ ಮಾಡಬಹುದು.