Telegram Join Telegram

ಜೀವನದಲ್ಲಿ ಅಡೆತಡೆ ಬಂದರೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ! Never Lose Confidence – ಇವರ ಸಾಧನೆ ಎಲ್ಲರಿಗೂ ಮಾದರಿ

ಜೀವನದಲ್ಲಿ ಅಡೆತಡೆ ಬಂದರೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ! Never Lose Confidence

ಜಗತ್ತಿನಲ್ಲಿ ದಿನ ದಿನ ಎಷ್ಟೋ ಅಪಘಾತಗಳು ಆಗುತ್ತಿರುತ್ತವೆ. ಕೆಲವೊಂದು ಆಕಸ್ಮಿಕ ಘಟನೆಗಳು ಮತ್ತು ಹುಟ್ಟಿನಿಂದ ಆಗಿರುವ ಸಮಸ್ಯೆಗಳು, ಅಪಘಾತಗಳು ಜೀವನದಲ್ಲಿ ನಡೆದಿರುತ್ತದೆ. ಕೆಲವರು ಘಟನೆಗಳಿಂದ ಚಿಂತೆ, ವೇದನೆಯಿಂದ ನೊಂದು ಜೀವನವೇ ಬೇಡ ಎಂಬ ನಿರ್ಧಾರ ಮಾಡಿ ಆತ್ಮಹತ್ಯೆ ಮಾಡುವ ಪ್ರಸಂಗಗಳಿವೆ. ಇನ್ನು ಕೆಲವರು ಮಾನಸಿಕವಾಗಿ ಚಿಂತೆ ಮಾಡುತ್ತಾ ಆರೋಗ್ಯದ ಕಡೆಗೆ ಗಮನವಿಡುವುದಿಲ್ಲ. ಒಬ್ಬ ಆರೋಗ್ಯವಾಗಿದ್ದ ವ್ಯಕ್ತಿಗೆ ಕಲ್ಪನೆಯೂ ಮಾಡದೇ ಇರುವಂತಹ ಅಪಘಾತವಾಗಿ ಒಂದು ಕ್ಷಣದಲ್ಲಿ ದೇಹದ ಅಂಗವನ್ನು ಕಳೆದುಕೊಂಡಾಗ ಅವನಲ್ಲಿ ಆಗುವ ಮಾನಸಿಕ ಹಾಗೂ ಶಾರೀರಿಕವಾದ ನೋವಿನಿಂದ ಆತ್ಮವಿಶ್ವಾಸವನ್ನು ಕಳೆದು ಮತ್ತೆ ಮೊದಲಿನಂತೆ ಜೀವನವನ್ನು ಕಾಣುವುದು ಅಷ್ಟು ಸುಲಭವಲ್ಲ. ಮೊದಲಿನಂತೆ ಜೀವನ ಕಾಣಬೇಕಾದರೆ ಅವನ ದೃಢನಿಧಾರ, ಗುರಿ ಗಟ್ಟಿಯಾಗಿರಬೇಕು. ಹಾಗೆಯೇ ಸ್ವಂತ ನಿರ್ಧಾರ ಮಾಡಿ ಧೈರ್ಯ, ಛಲದಿಂದ ಜೀವನ ನಡೆಸುವ ಸಾಮರ್ಥ್ಯ ಎಲ್ಲರಲ್ಲೂ ಇರುವುದಿಲ್ಲ.

ಅಪಘಾತಗಳಿಂದ ಕೆಲವರ ಜೀವನದಲ್ಲಿ ಹೊಸ ತಿರುವು ದೊರೆತು ಹೆಸರುವಾಸಿಯಾಗಿ ಗಣ್ಯರೆನಿಸಿಕೊಂಡಿದ್ದಾರೆ. ನಮಗೆಲ್ಲಾ ಸ್ಪೂರ್ತಿಯಾಗಿದ್ದಾರೆ. ಅಂತಹ ಹೊಸ ತಿರುವನ್ನು ಪಡೆದ ವ್ಯಕ್ತಿಗಳು ಹಲವಾರು.

ಇವರ ಸಾಧನೆ ಎಲ್ಲರಿಗೂ ಮಾದರಿ!

ಸುಧಾಚಂದ್ರನ್: ಕೇರಳದವರಾದ ಸುಧಾಚಂದ್ರನ್, ಹದಿನಾರನೇ ವಯಸ್ಸಿನಲ್ಲಿದ್ದಾಗ ಅಪಘಾತವೊಂದನ್ನು ಎದುರಿಸಿದರು. ಕಾಲನ್ನು ತೆಗೆಯಲೇಬೇಕಾದ ಸಂದರ್ಭ ಬಂತು. ಅನಂತರ ಜೈಪುರ ಕಂಪೆನಿಯ ಕೃತಕ ಕಾಲನ್ನು ಪಡೆದು ತನ್ನ ಅಂಗವೈಕಲ್ಯವನ್ನು ನಿವಾರಿಸಿಕೊಂಡರು. ಈಗ ದೇಶದ ಅತ್ಯಂತ ಜನಪ್ರಿಯ ಮತ್ತು ಮೆಚ್ಚುಗೆ ಪಡೆದ ಶಾಸ್ತ್ರೀಯ ನೃತ್ಯಗಾರರಲ್ಲಿ ಒಬ್ಬರಾಗಿದ್ದಾರೆ. ಅಂತರರಾಷ್ಟ್ರೀಯದಲ್ಲಿ ಭರತನಾಟ್ಯ ನಡೆಸಿದ ನಂತರ, ಭಾರತೀಯ ದೂರದರ್ಶನ ಮತ್ತು ಚಲನಚಿತ್ರೋದ್ಯಮದಲ್ಲಿ ಪ್ರಸಿದ್ಧ ವ್ಯಕ್ತಿಯಾಗಿದ್ದಾರೆ. ತನ್ನ ಅದ್ಭುತ ಪ್ರತಿಭೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದು ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ.

Girish Sharmaಗಿರೀಶ್ ಶರ್ಮಾ: ಮೂಲತಃ ರಾಜಸ್ಥಾನದವರಾದ ಗುಜರಾತ್, ರಾಜ್‌ಕೋಟ್‌ನಲ್ಲಿ ಹುಟ್ಟಿ ಬೆಳೆದ ಗಿರೀಶ್ ಶರ್ಮಾ ತನ್ನ ಎರಡು ವರ್ಷ ವಯಸ್ಸಿನಲ್ಲಿದ್ದಾಗ ರೈಲು ಅಪಘಾತದಲ್ಲಿ ಕಾಲು ಕಳೆದುಕೊಂಡರು. ನಂತರ ಹದಿನಾಲ್ಕು ವರ್ಷ ವಯಸ್ಸಿನಲ್ಲಿ ಆಟ ಆಡಲು ಪ್ರಾರಂಭಿಸಿದರು. ಅವರು ಕೇವಲ ಒಂದು ಕಾಲಿನಲ್ಲಿ ಆಟವನ್ನು ಸಲೀಸಾಗಿ ಆಡುತ್ತಾರೆ. ಬ್ಯಾಡ್ಮಿಂಟನ್ ಚಾಂಪಿಯನ್ ಆಗಿ ಮುಂದುವರಿದಿದ್ದಾರೆ. ಭಾರತದಲ್ಲಿ ಅಂಗವಿಕಲತೆಗಾಗಿ ನಡೆದ ಪ್ಯಾರೋಲಿಂಪಿಕ್ ಏಷ್ಯಾ ಕಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇಸ್ರೇಲ್ ಮತ್ತು ಥೈಲ್ಯಾಂಡ್‌ನಂತಹ ಇತರ ದೇಶಗಳಲ್ಲಿ ಆಡಿದ್ದಾರೆ. ರಾಜ್‌ಕೋಟ್ ನಗರದ ಭಾರೀ ಸಂಚಾರ ಪ್ರದೇಶಗಳಲ್ಲಿ ಬೈಸಿಕಲ್ ಸಹ ಯಾವುದೇ ಸಮಸ್ಯೆಯಿಲ್ಲದೆ ಓಡಿಸುತ್ತಾರೆ.

Arunima Sinhaಅರುಣಿಮಾ ಸಿನ್ಹಾ: ಇವರು ಉತ್ತರಪ್ರದೇಶದ ಮಾಜಿ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಮತ್ತು ಫುಟ್‌ಬಾಲ್ ಆಟಗಾರ. ಏಪ್ರಿಲ್ 11, 2011ರಂದು ಲಕ್ನೋದಲ್ಲಿ ದೆಹಲಿಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಳ್ಳರು ಅವರಲ್ಲಿದ್ದ ಚೀಲ ಮತ್ತು ಚಿನ್ನದ ಸರವನ್ನು ಕಸಿಯಲು ಒತ್ತಾಯ ಮಾಡಿದಾಗ, ಅವರು ನಿರಾಕರಿಸಿದರು. ಅರುಣಿಮಾರನ್ನು ಕಳ್ಳರು ಚಲಿಸುವ ರೈಲಿನಿಂದ ಹೊರಗೆ ದೂಡಿದರು. ರೈಲ್ವೇ ಟ್ರ್ಯಾಕ್ ನಲ್ಲಿ ಬಿದ್ದಾಗ ಇನ್ನೊಂದು ರೈಲು ಸಮಾನಾಂತರ ಮಾರ್ಗದಲ್ಲಿ ಬರುತ್ತ್ತಿತ್ತು ಮತ್ತು ಅವರ ಮೊಣಕಾಲಿನ ಕೆಳಗಡೆಯ ಭಾಗದ ಮೇಲೆ ರೈಲು ಓಡಿತು. ಆಸ್ಪತ್ರೆಯಲ್ಲಿ ವೈದ್ಯರು ಅವರ ಜೀವ ಉಳಿಸಲು ಮೊಣಕಾಲಿನ ಕೆಳಗೆ ಕಾಲನ್ನು ಕತ್ತರಿಸಿ ಹಾಕಬೇಕಾಯಿತು.

ಬಲವಾದ ನಿರ್ಣಯ ಮತ್ತು ಆತ್ಮವಿಶ್ವಾಸದಿಂದ ಕೃತಕಕಾಲಿನೊಂದಿಗೆ ತಮ್ಮ ಸವಾಲುಗಳನ್ನು ನಿವಾರಿಸಿದರು ಮತ್ತು ಇತಿಹಾಸವನ್ನು ಮಾಡಿದರು. 2013 ಮೇ 21ರಂದು ಮೌಂಟ್ ಎವರೆಸ್ಟ್ ಏರಿದ ಮೊದಲ ಅಂಗವಿಕಲ ಮಹಿಳೆ ಎಂಬ ಹೆಗ್ಗಳಿಕೆ ಅವರದು. ಡಿಸೆಂಬರ್ 2014ರಲ್ಲಿ ಅವರು ಬರೆದ “ಬಾರ್ನ್ ಅಗೈನ್ ಆನ್ ದಿ ಮೌಂಟೈನ್” ಎಂಬ ಪುಸ್ತಕವನ್ನು ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಂದ ಬಿಡುಗಡೆಗೊಳಿಸಿದರು. 2015ರಲ್ಲಿ ಅವರು ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು.

Shekhar Naikಶೇಖರ್ ನಾಯ್ಕ್: ಶಿವಮೊಗ್ಗ ಕರ್ನಾಟಕದವರಾದ ಶೇಖರ್ ನಾಯ್ಕ್ ಭಾರತದ ಅಂಧ ಕ್ರಿಕೆಟ್ ಆಟಗಾರ ಮತ್ತು ಭಾರತದ ರಾಷ್ಟ್ರೀಯ ಕುರುಡು ಕ್ರಿಕೆಟ್ ತಂಡದ ಮಾಜಿ ನಾಯಕ. ಅವರು 2012ರಲ್ಲಿ ಟಿ 20 ಬ್ಲೈಂಡ್ ಕ್ರಿಕೆಟ್ ವರ್ಲ್ಡ್ ಕಪ್, 2014ರಲ್ಲಿ ಬ್ಲೈಂಡ್ ಕ್ರಿಕೆಟ್ ವರ್ಲ್ಡ್ ಕಪ್‌ನಲ್ಲಿ ಜಯಗಳಿಸಿ ಭಾರತದ ನಾಯಕತ್ವ ವಹಿಸಿದರು. ಭಾರತ ಸರಕಾರವು ನಾಯಕ್‌ಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

Malati Krishnamurthyಮಾಲತಿ ಕೃಷ್ಣಮೂರ್ತಿ ಹೊಳ್ಳ: ಬೆಂಗಳೂರಿನಲ್ಲಿ ಜನಿಸಿದ ಅವರು ತಮ್ಮ ಒಂದು ವರ್ಷ ವಯಸ್ಸಿನವರಿದ್ದಾಗ ಜ್ವರದಿಂದ ಪಾರ್ಶ್ವವಾಯುವಿಗೆ ಒಳಗಾದರು. ಎರಡು ವರ್ಷಗಳ ಕಾಲ ವಿದ್ಯುತ್ ಆಘಾತ ಚಿಕಿತ್ಸೆಯಿಂದ ತನ್ನ ಮೇಲಿನ ದೇಹದ ಶಕ್ತಿಯನ್ನು ಸುಧಾರಿಸಿದೆ. ಜೀವನದಲ್ಲಿ ಅತ್ಯುತ್ತಮವಾಗಿ ಬದುಕಲು ನಿರ್ಧರಿಸಿ ಕ್ರೀಡೆಯನ್ನು ಆಯ್ಕೆ ಮಾಡಿದ ಅವರು ಕಾಲೇಜಿನಲ್ಲಿ ವಿವಿಧ ಆಟಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಇಂದು ಅವರು ಪ್ಯಾರಾ-ಒಲಿಂಪಿಕ್ಸ್ ಸೇರಿದಂತೆ ವಿವಿಧ ಅಂತರಾಷ್ಟ್ರೀಯ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದಾರೆ. ಅವರ ಸಾಧನೆಗಾಗಿ ಅಂತರಾಷ್ಟ್ರೀಯ ಪರ ಕ್ರೀಡಾಪಟು ಭಾರತದಿಂದ ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. 300 ಪದಕಗಳನ್ನು ಗೆದ್ದಿದ್ದಾರೆ. ಗ್ರಾಮೀಣ ಭಾರತದಿಂದ ಅಂಗವಿಕಲ ಮಕ್ಕಳಿಗೆ ಸಹಾಯ ಮಾಡಲು ಅವರು ಮಾತೃ ಫೌಂಡೇಶನ್ ನಡೆಸುತ್ತಿದ್ದಾರೆ.

Ravindra jainರವೀಂದ್ರ ಜೈನ್: ದೃಷ್ಟಿಹೀನರಾಗಿ ಹುಟ್ಟಿದ ಜೈನ್ ಚಿಕ್ಕ ವಯಸ್ಸಿನಲ್ಲಿಯೇ ಹಾಡುತ್ತಾ ಪ್ರಸಿದ್ಧರಾದವರು. 1970ರ ದಶಕದ ಅತ್ಯಂತ ಗಮನಾರ್ಹ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದರು. ಹಿಂದಿ ಚಲನಚಿತ್ರಗಳಿಗಾಗಿ ವಿವಿಧ ಸೂಪರ್‌ಹಿಟ್ ಗೀತೆಗಳನ್ನು ರಚಿಸಿ, ಅಲ್ಬಮ್‌ಗಳನ್ನು ಮಾಡಿ ಎಲ್ಲರಿಂದ ಪ್ರಶಂಸಿದ್ದಾರೆ. ಅವರ ತಂದೆ ನಿಧನ ಹೊಂದಿದ ಸಂದರ್ಭ ಧ್ವನಿಮುದ್ರಿಕೆ ಅಂತಿಮಗೊಳ್ಳುವವರೆಗೂ ಅವರು ರೆಕಾರ್ಡಿಂಗ್ ಕೊಠಡಿ ಬಿಡಲಿಲ್ಲ. ತನ್ನನ್ನು ಕೆಲಸದ ಕಡೆಗೆ ಸಮರ್ಪಿಸಿಕೊಂಡಿದ್ದರು.

H Ramachandranಎಚ್. ರಾಮಕೃಷ್ಣನ್: ಎರಡು ವರ್ಷ ವಯಸ್ಸಿನಲ್ಲಿಯೇ ಎರಡು ಕಾಲುಗಳ ಪೋಲಿಯೋ ಪೀಡಿತರಾಗಿದ್ದರು. ಜೀವನದಲ್ಲಿ ಪ್ರತಿ ಹಂತಕ್ಕೂ ಹೋರಾಡಬೇಕಾಯಿತು. ಅವರು ಶಾಲೆಗೆ ಹೋಗಬೇಕಾಗಿ ಬಂದಾಗಲೂ ಅವರು ಸ್ಥಳೀಯ ಶಾಲೆಗೆ ಪ್ರವೇಶ ನಿರಾಕರಿಸಿದರು. ರಾಮಕೃಷ್ಣನ್ ಅವರು ಸುದ್ದಿ ಓದುಗ, ಭಾಷಾಂತರಕಾರ ಮತ್ತು ವರದಿಗಾರರಾಗಿ ಕರ್ತವ್ಯ ನಡೆಸಿದ್ದರು. 40 ವರ್ಷಗಳ ಕಾಲ ಪತ್ರಕರ್ತನಾಗಿ ಕೆಲಸ ಮಾಡಿದರು. ಅವರು ಸಂಗೀತಗಾರರಾಗಿದ್ದಾರೆ ಮತ್ತು ಅವರ ಪ್ರತಿಭೆಯು ವಿವಿಧ ವೇದಿಕೆಗಳಲ್ಲಿ ಪ್ರದರ್ಶಿಸಿದ್ದಾರೆ.

Akbar Khanಅಕ್ಬರ್ ಖಾನ್: ರಾಜಸ್ಥಾನದ ಬಡ ಕುಟುಂಬದಲ್ಲಿ ದೃಷ್ಟಿಹೀನರಾಗಿ ಜನಿಸಿದ ಖಾನ್ ಕಷ್ಟದಲ್ಲಿ ಬಾಲ್ಯವನ್ನು ಕಂಡರು. ಆದರೆ ಜನ್ಮದಿಂದ ದೃಷ್ಟಿಹೀನತೆಯಿಂದ ಬಳಲುತ್ತಿದ್ದ ಅವನ ಹಿರಿಯ ಸಹೋದರನ ಅಗಾಧವಾದ ಬೆಂಬಲದೊಂದಿಗೆ ಅತ್ಯುತ್ತಮ ಫಲಿತಾಂಶದಿಂದ ಖಾನ್ ತನ್ನ ಅಧ್ಯಯನವನ್ನು ಮುಂದುವರೆಸಿದರು. ಸಂಗೀತದಲ್ಲಿ ಆಸಕ್ತಿಯನ್ನು ಹೊಂದಿದ್ದ ಅವರನ್ನು ಕಲಾವಿದನಾಗಿ ಮತ್ತು ತೀರ್ಪುಗಾರನಾಗಿ ವಿವಿಧ ವೇದಿಕೆಗಳಿಗೆ ಆಹ್ವಾನಿಸಲಾಯಿತು. ಅವರ ದೊಡ್ಡ ಸಾಧನೆಗಳೆಂದರೆ, 1989ರಲ್ಲಿ ಅಸಮರ್ಥತೆಯ ವ್ಯಕ್ತಿಗಳ ಕಲ್ಯಾಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡರು.

ಆಕಸ್ಮಿಕ ಘಟನೆಯಿಂದ ಜೀವನ ಬದಲಾಯಿತು!

ಹೀಗೆಯೇ ತಮ್ಮ ಜೀವನದಲ್ಲಿ ನಡೆದ ಆಕಸ್ಮಿಕ ಘಟನೆಗಳಿಂದ ಪ್ರಖ್ಯಾತರಾದವರು ಇನ್ನೂ ಬಹಳಷ್ಟು ಮಂದಿ ಇದ್ದಾರೆ.

ರಸ್ತೆ ಬದಿಯಲ್ಲಿ ಬಿದ್ದ ಪುಸ್ತಕದ ಒಂದು ತುಂಡು ಕಾಗದವನ್ನು ಕೈಗೆತ್ತಿಕೊಂಡು ಅದನ್ನು ಓದಿ ಆಸಕ್ತನಾಗಿ, ಆ ಪುಸ್ತಕವನ್ನು ಪೂರ್ಣ ಓದಿ ನಂತರ ಇಂತಹ ಪುಸ್ತಕಗಳನ್ನು ಶೇಖರಿಸಿ ಓದುತ್ತಾ, ಓದುತ್ತಾ ತನ್ನ ಅನಿಸಿಕೆಗಳನ್ನು ಬರವಣಿಗೆಗೆ ಇಳಿಸಿ, ಆಕಸ್ಮಿಕವಾಗಿ ಸಿಕ್ಕಿದ ಆ ಕಾಗದದ ಚೂರಿನಿಂದ ಜಗದ್ವಿಖ್ಯಾತ ಲೇಖಕನಾಗಿ ಬೆಳೆದ ಅಮೇರಿಕದ ಮಾರ್ಕ್ ತೈವನ್.

ಮೇರಿ ಕ್ಯೂರಿ 1911ರಲ್ಲಿ ತನ್ನ ಜೀವನದಲ್ಲಿ ಆದ ಆಕಸ್ಮಿಕದಿಂದಾಗಿ ನೊಬೆಲ್ ಪ್ರಶಸ್ತಿ ಪಡೆಯುವ ಮಟ್ಟಕ್ಕೆ ಏರಿದ್ದಳು. ಪೋಲಾಂಡಿನವರಾದ ಈಕೆ ತನ್ನ 19ನೇ ವಯಸ್ಸಿನಲ್ಲಿ ಸಿರಿವಂತ ಮನೆತನದ ಒಬ್ಬ ಹತ್ತು ವರ್ಷದ ಬಾಲಕನಿಗೆ ಪಾಠ ಹೇಳಿ ಕೊಡುತ್ತಿದ್ದಳು. ಆ ಮನೆಯಲ್ಲಿದ್ದ ಬಾಲಕನ ಅಣ್ಣ ಅವಳ ಚೆಲುವನ್ನು ನೋಡಿ ಮದುವೆಯಾಗಲು ಬಯಸಿದ. ಆದರೆ, ಅವನ ತಾಯಿ ಕ್ಯೂರಿಯ ಬಡತನವನ್ನು ನೋಡಿ ಈ ಮದುವೆಗೆ ಒಪ್ಪಲಿಲ್ಲ. ಇದರಿಂದ ಕ್ಯೂರಿ ಬೇಸರಗೊಂಡು, ಜಿಗುಪ್ಸೆಯಿಂದ ಪ್ಯಾರೀಸ್‌ಗೆ ಬಂದು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ತನ್ನ ಜೀವನವನ್ನೇ ಸಂಶೋಧನೆಗಾಗಿ ಮೀಸಲಿಟ್ಟು ರೇಡಿಯಂನ್ನು ಕಂಡು ಹಿಡಿದಳು. ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ಎಂಬ ಎರಡು ನೊಬೆಲ್ ಪ್ರಶಸ್ತಿಗಳನ್ನು ಪಡೆದ ಮೊದಲ ವ್ಯಕ್ತಿ.

ವಿಲಿಯಂ ಷೇಕ್ಸ್ಪಿಯರ್ ತನ್ನ ಬಾಲ್ಯದಲ್ಲಿ ಶಾಲೆಗೆ ಹೋಗುತ್ತಾ ಜೊತೆಗೆ ಈತ ತನ್ನ ಕುಲಕಸುಬಾದ ಮಾಂಸ ಮಾರುವುದನ್ನು ಮಾಡುತ್ತಿದ್ದ. ಒಮ್ಮೆ ಶಾಲೆಯಿಂದ ಹಿಂತಿರುಗುತ್ತಿದ್ದಾಗ ಪಕ್ಕದ ಹೊಲದಲ್ಲಿ ಒಬ್ಬ ಶ್ರೀಮಂತ ತಾನು ಬೇಟೆಯಾಡಿದ ಪ್ರಾಣಿಯನ್ನು ಹುಲ್ಲುಮೆದೆಯಲ್ಲಿ ಅಡಗಿಸಿಡುವುದನ್ನು ಕಂಡ. ಅಲ್ಲೇ ನಿಂತಿದ್ದ ಷೇಕ್ಸ್ಪಿಯರ್ ಆತ ಹೋದನೆಂದು ತಿಳಿದು ಮೆಲ್ಲನೆ ತನ್ನ ವ್ಯಾಪಾರಕ್ಕಾಗಿ ಆ ಪ್ರಾಣಿಯ ದೇಹವನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿದ. ಆದರೆ ಅಲ್ಲೇ ಇದ್ದ ಸಾಹುಕಾರ ಕೋಪಗೊಂಡು ಷೇಕ್ಸ್ಪಿಯರ್‌ನನ್ನು ಹೊಡೆಯಲು ಓಡಿಸಿಕೊಂಡು ಬಂದ. ಹೆದರಿಕೆಯಿಂದ ಮನೆಗೆ ಹೋಗದ ಷೇಕ್ಸ್ಪಿಯರ್ ಲಂಡನಿಗೆ ಓಡಿ ಹೋದ. ನಂತರ 1594ರಲ್ಲಿ ನಾಟಕ ಕಂಪೆನಿಯೊಂದರಲ್ಲಿ ನಟನಾಗಿ ಸೇರಿದ. ಈತನಿಗೆ ಇದ್ದ ಸಭಾಕಂಪನ ಹಾಗೂ ಕೆಟ್ಟ ನಟನೆಯಿಂದಾಗಿ ಈತನೇ ಬೇಸರಗೊಂಡು ಆ ಕಂಪೆನಿಗೆ ನಾಟಕ ಬರೆಯಲು ಪ್ರಾರಂಭಿಸಿದ. ಇಂದು ಪ್ರಪಂಚದಲ್ಲೆಲ್ಲಾ ಷೇಕ್ಸ್ಪಿಯರ್ ಹೆಸರಾಂತ ನಾಟಕಕಾರರ ಅಗ್ರಪಂಕ್ತಿಯಲ್ಲಿದ್ದಾರೆ. ಈ ಆಕಸ್ಮಿಕ ಆಗದೇ ಇರುತ್ತಿದ್ದರೆ ಷೇಕ್ಸ್ಪಿಯರ್ ಎಲ್ಲಿರುತ್ತಿದ್ದರು?

ಹೀಗೆ ಪ್ರತಿಯೊಬ್ಬರ ಜೀವನದಲ್ಲಿ ಹಲವಾರು ಸಮಸ್ಯೆಗಳು ಬಂದಿರುತ್ತದೆ. ನಮ್ಮ ಜೀವನದಲ್ಲಿ ಹೀಗೆಲ್ಲ ಆಯಿತು ಅಂತ ಚಿಂತೆ ಮಾಡದೆ ಜೀವನದಲ್ಲಿ ಗುರಿ ಇಟ್ಟು ಧೈರ್ಯದಿಂದ ಕೆಲಸ ಮಾಡಿಕೊಂಡು ಮುನ್ನಡೆಯಬೇಕು. ಇಷ್ಟೆಲ್ಲ ಸಮಸ್ಯೆಗಳು, ನೋವಿನಲ್ಲೂ ಇವರು ಮಾಡಿದ ಸಾಧನೆ ಎಲ್ಲರಿಗೂ ಸ್ಪೂರ್ತಿದಾಯಕ.