Summer healthy drinks: ಬೇಸಿಗೆಯಲ್ಲಿ ದೇಹ ತಂಪಾಗಿಸೋ ಪಾನೀಯಗಳು.
ಬೇಸಿಗೆ ಬಂದಾಗ ಎಲ್ಲರಿಗೂ ಕಾಡುವ ಮೊದಲ ಸಮಸ್ಯೆಯೆ ಬಾಯಾರಿಕೆ. ಬೇಸಿಗೆ ಕಾಲದಲ್ಲಿ ಉಷ್ಣತೆ, ಬೆವರಿನಿಂದ ದೇಹದಲ್ಲಿ ನೀರಿನ ಕೊರತೆ ಆಗುತ್ತದೆ. ಈ ಸಮಯದಲ್ಲಿ ನಮ್ಮ ದೇಹಕ್ಕೆ ಸರಿಯಾದ ಹೈಡ್ರೇಶನ್ ಮತ್ತು ಪೋಷಕಾಂಶಗಳು ಅತ್ಯಂತ ಅಗತ್ಯವಾಗಿದೆ. ಬಹುತೇಕ ಜನರು ತಂಪಾದ ಪಾನೀಯಗಳ ಹೆಸರಿನಲ್ಲಿ ಸೋಡಾ, ಕೋಲ್ಡ್ ಡ್ರಿಂಕ್ಸ್ ಕುಡಿಯುತ್ತಾರೆ. ಆದರೆ ಅವು ಆರೋಗ್ಯಕ್ಕೆ ಹಾನಿಕಾರಕ.
ಆದ್ದರಿಂದ, ಈ ಬೇಸಿಗೆಯಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸ್ವಾಭಾವಿಕ ಮತ್ತು ಆರೋಗ್ಯಕರ ಪಾನೀಯಗಳನ್ನು ಸೇವಿಸುವುದು ಅತ್ಯಂತ ಮುಖ್ಯ.
ಬೇಸಿಗೆಯಲ್ಲಿ ಆರೋಗ್ಯಕರ ಪಾನೀಯಗಳ ಮಹತ್ವ
ಬೇಸಿಗೆಯಲ್ಲಿ ನಾವು ಹೆಚ್ಚು ಬೆವರಿನಿಂದ ದೇಹದಿಂದ ನೀರು ಮತ್ತು ಉಪ್ಪುಗಳು ಹೊರಹೋಗುತ್ತವೆ. ಇದರಿಂದ ದೇಹದಲ್ಲಿ ನೀರಿನ ಕೊರತೆ (ಡಿಹೈಡ್ರೇಶನ್), ತಲೆ ಸುತ್ತು, ನರ ದೌರ್ಬಲ್ಯ, ಚರ್ಮ ಒಣಗುವುದು, ಜೀರ್ಣಕ್ರಿಯೆ ಸಮಸ್ಯೆಗಳು ಇವು ಸಂಭವಿಸಬಹುದು.
ಆದ್ದರಿಂದ ದಿನವಿಡೀ ನೀರು ಮತ್ತು ಆರೋಗ್ಯಕರ ಪಾನೀಯಗಳನ್ನು ಸೇವಿಸುವುದು ಅತ್ಯಂತ ಅಗತ್ಯ.
ಎಳನೀರು (ತೆಂಗಿನಕಾಯಿ ನೀರು) – ಪ್ರಕೃತಿಯ ಶಕ್ತಿಯುತ ಪಾನೀಯ
ತೆಂಗಿನಕಾಯಿ ನೀರು ಬೇಸಿಗೆಯಲ್ಲಿ ಅತ್ಯುತ್ತಮ ಪಾನೀಯಗಳಲ್ಲಿ ಒಂದು. ಇದರಲ್ಲಿ ಪೊಟಾಷಿಯಂ, ಮೆಗ್ನೀಷಿಯಂ ಮುಂತಾದ ಇಲೆಕ್ಟ್ರೋಲೈಟ್ಸ್ ಹೆಚ್ಚು ಇರುತ್ತವೆ. ನೈಸರ್ಗಿಕ ಪಾನೀಯವಾಗಿದೆ.
ಪ್ರಯೋಜನಗಳು:
- ದೇಹವನ್ನು ತಂಪಾಗಿರಿಸುತ್ತದೆ
- ನೀರಿನ ಕೊರತೆಯನ್ನು ತಡೆಯುತ್ತದೆ
- ತಕ್ಷಣ ಶಕ್ತಿ ನೀಡುತ್ತದೆ
- ಜೀರ್ಣಕ್ರಿಯೆಗೆ ಸಹಾಯಕ
- ತೂಕ ಇಳಿಕೆಗೂ ಸಹಾಯಕ.
- ಎಳನೀರಿನಲ್ಲಿ ಫೈಬರ್ ಅಂಶ ಹೆಚ್ಚಾಗಿದ್ದು, ಕೊಬ್ಬಿನಾಂಶ ಕಡಿಮೆ ಇರುತ್ತದೆ. ಫೈಬರ್ ದೇಹದ ಜೀರ್ಣ ಕ್ರಿಯೆ ನಿಧಾನಗೊಳಿಸಿ, ಹಸಿವನ್ನು ನಿಗ್ರಹಿಸುತ್ತದೆ.
- ವಾಂತಿ ಬೇಧಿ ಹಾಗೂ ಆಮಶಂಕೆಯಾದಾಗ ದೇಹದಿಂದ ನಷ್ಟವಾಗುವ ನೀರು ಹಾಗೂ ಖನಿಜಾಂಶಗಳ ತೂಕವನ್ನು ಎಳನೀರು ಸರಿದೂಗಿಸುತ್ತದೆ.
ನಿಂಬೆ ಹಣ್ಣಿನ ರಸ (ಲೆಮನ್ ಜ್ಯೂಸ್)
ನಿಂಬೆ ಹಣ್ಣಿನ ರಸವು ಬೇಸಿಗೆಯಲ್ಲಿ ಬಹಳ ಜನಪ್ರಿಯ ಪಾನೀಯ. ಇದು ವಿಟಮಿನ್ ಸಿ ನಿಂದ ಸಮೃದ್ಧವಾಗಿದೆ. ಒಂದು ಲೋಟ ನೀರಿಗೆ ಅರ್ಧ ನಿಂಬೆಹಣ್ಣಿನ ರಸ ಹಿಂಡಿ, ರುಚಿಗೆ ತಕ್ಕಷ್ಟು ಸಕ್ಕರೆ/ಬೆಲ್ಲ ಮತ್ತು ಉಪ್ಪು ಸೇರಿಸಿ ಕುಡಿಯಿರಿ. ಆಯಾಸ ಕಡಿಮೆ ಮಾಡಲು ಇದು ಅದ್ಭುತ ತಂಪು ಪಾನೀಯವಾಗಿದೆ.
ಪ್ರಯೋಜನಗಳು:
ದೇಹದಲ್ಲಿನ ವಿಷಕಾರಿ ಅಂಶಗಳನ್ನು ನೈಸರ್ಗಿಕವಾಗಿ ಹೊರಹಾಕಿರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದು ತೂಕ ಇಳಿಕೆ, ಚರ್ಮದ ಕಾಂತಿ, ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಂಬೆ, ಶುಂಠಿ, ಸೌತೆಕಾಯಿ, ಚಿಯಾ ಬೀಜಗಳ ನೀರು ಮತ್ತು ಹಣ್ಣಿನ ರಸಗಳು ಜನಪ್ರಿಯ ಡಿಟಾಕ್ಸ್ ಪಾನೀಯಗಳಾಗಿವೆ. ಸ್ವಲ್ಪ ಉಪ್ಪು ಅಥವಾ ಜೇನು ಸೇರಿಸಿದರೆ ಇನ್ನೂ ರುಚಿ ಹೆಚ್ಚುತ್ತದೆ.
ಮಜ್ಜಿಗೆ (ಬಟರ್ ಮಿಲ್ಕ್)
ಬಿಸಿಲು ಮೇಲೇರಿದಾಗ, ದೇಹದ ಉಷ್ಣತೆಯೂ ಹೆಚ್ಚಾದಾಗ ತಂಪಾದ ಮಜ್ಜಿಗೆ ಅಥವಾ ಲಸ್ಸಿಯನ್ನು ಕುಡಿಯುವುದರಿಂದ ಜೀವಕ್ಕೆ ತಂಪೆನಿಸುತ್ತದೆ. ಮಜ್ಜಿಗೆ ಭಾರತೀಯ ಪರಂಪರೆಯ ಪಾನೀಯ. ಇದು ದೇಹಕ್ಕೆ ತಂಪು ನೀಡುವುದಲ್ಲದೆ ಆರೋಗ್ಯಕ್ಕೂ ಒಳ್ಳೆಯದು. ನಮ್ಮ ದೇಹವನ್ನು ತಂಪಾಗಿಸಲು ಜೀರಿಗೆ, ಪುದೀನ ಮತ್ತು ಉಪ್ಪಿನೊಂದಿಗೆ ಒಂದು ಲೋಟ ಮಜ್ಜಿಗೆ ಸೇವನೆ ಸೂಕ್ತವಾದುದು. ದಿನವಿಡೀ ನಿಮ್ಮನ್ನು ಚಟುವಟಿಕೆಯಿಂದ ಇರಿಸುತ್ತದೆ. ಮಜ್ಜಿಗೆಗೆ ಹುರಿದ ಜೀರಿಗೆ ಮತ್ತು ಕಪ್ಪು ಉಪ್ಪನ್ನು ಸೇರಿಸುವುದರಿಂದ ಗ್ಯಾಸ್ಟ್ರಿಕ್, ಆಲಸ್ಯ ಮತ್ತು ಹೊಟ್ಟೆ ನೋವು ನಿವಾರಣೆಯಾಗುತ್ತದೆ.
ಪ್ರಯೋಜನಗಳು: ದೇಹವನ್ನು ತಂಪಾಗಿಡುತ್ತದೆ, ಜೀರ್ಣಕ್ರಿಯೆ ಸುಧಾರಿಸುತ್ತದೆ, ಹೊಟ್ಟೆ ಉರಿಯನ್ನು ಕಡಿಮೆ ಮಾಡುತ್ತದೆ.
ಹಾಗೆಯೆ ಮಜ್ಜಿಗೆಯನ್ನು ಮಸಾಲಾ ಮಜ್ಜಿಗೆಯಾಗಿಸಿ ಕುಡಿದರೆ ಇನ್ನೂ ಹೆಚ್ಚಾಗಿ ಸಮಾಧಾನವಾಗುತ್ತದೆ.
1 ಕಪ್ ಮೊಸರು ಅಥವಾ ಮಜ್ಜಿಗೆಯನ್ನು ಒಂದು ಮಿಕ್ಸಿ ಜಾರ್ನಲ್ಲಿ ಹಾಕಿ, ಅದಕ್ಕೆ ಒಂದು ಕಪ್ ನೀರು ಸೇರಿಸಿ, ಶುಂಠಿ, ಹಸಿ ಮೆಣಸಿನಕಾಯಿ, ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ಚಾಟ್ ಮಸಾಲ, ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ಮಸಾಲಾ ಮಜ್ಜಿಗೆ ರೆಡಿ ಆದಮೇಲೆ ಐಸ್ ಕ್ಯೂಬ್ ಹಾಕಿ ಕುಡಿದರೆ ಅದರಲ್ಲಿರುವ ಖಾರ ಮತ್ತು ಹುಳಿ ರುಚಿಯಿಂದ ಸಂತೋಷವೆನಿಸುತ್ತದೆ.
ತಾಜಾ ಹಣ್ಣಿನ ರಸಗಳು
ಕಲ್ಲಂಗಡಿ, ಮಾವು, ಕಿತ್ತಳೆ, ದ್ರಾಕ್ಷಿ ಹಣ್ಣುಗಳಿಂದ ತಯಾರಿಸಿದ ರಸಗಳು ಬೇಸಿಗೆಯಲ್ಲಿ ಅತ್ಯುತ್ತಮ. ಆದರೆ ಸಕ್ಕರೆ ಸೇರಿಸದೆ ಕುಡಿಯುವುದು ಉತ್ತಮ. ದೃಷ್ಟಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಿತ್ತಳೆ ಮತ್ತು ಕ್ಯಾರೆಟ್ ರಸಗಳು ಉತ್ತಮ, ಇದರಲ್ಲಿ A, C, ಮತ್ತು E ವಿಟಮಿನ್ ಇದೆ.
ಹಣ್ಣುಗಳ ರಾಜನೆಂದು ಕರೆಯುವ ಮಾವಿನ ಹಣ್ಣಿನ ಜ್ಯೂಸ್ ಕುಡಿದು ನೀವು ಕಬ್ಬಿನಾಂಶ ಕೊರತೆ ನೀಗಿಸಬಹುದು. ಇದರಲ್ಲಿ ವಿಟಮಿನ್ ಸಿ, ನಾರಿನಾಂಶ ಮತ್ತು ವಿಟಮಿನ್ ಎ ಇದೆ. ಹೃದಯ ಹಾಗೂ ನರಗಳ ಕಾರ್ಯಕ್ಕೂ ಇದು ತುಂಬಾ ಸಹಕಾರಿ ಆಗಿರುವುದು. ಮಾವಿನ ಹಣ್ಣಿನಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳು ದೇಹದಲ್ಲಿ ರಕ್ತದೊತ್ತಡ ನಿಯಂತ್ರಣ ಮಾಡಲು ಸಹಕಾರಿ ಆಗಿರುವುದು. ಹೊಟ್ಟೆಯ ಸಮಸ್ಯೆನ್ನು ನಿವಾರಣೆ, ಚರ್ಮ ಮತ್ತು ರಕ್ತದ ಮಟ್ಟವನ್ನು ಕಾಪಾಡುತ್ತದೆ. ಮಲಬದ್ಧತೆಯಿಂದ ಬಳಲುತ್ತಿದ್ದರೆ ಮಾವಿನ ಜ್ಯೂಸ್, ಅನಾನಸು ಜ್ಯೂಸ್ ಮತ್ತು ದ್ರಾಕ್ಷಿ ಜ್ಯೂಸ್ ತುಂಬಾ ಪರಿಣಾಮಕಾರಿ.
ಪ್ರಯೋಜನಗಳು: ವಿಟಮಿನ್ ಮತ್ತು ಖನಿಜಗಳಿಂದ ಸಮೃದ್ಧ, ದೇಹಕ್ಕೆ ಶಕ್ತಿ ನೀಡುತ್ತದೆ, ಚರ್ಮದ ಆರೋಗ್ಯ ಸುಧಾರಿಸುತ್ತದೆ
ಪುದೀನಾ ಶರ್ಬತ್
ಪುದೀನಾ ದೇಹಕ್ಕೆ ತಂಪು ನೀಡುವ ಗುಣ ಹೊಂದಿದೆ. ಬೇಸಿಗೆಯಲ್ಲಿ ಪುದೀನಾ ಶರ್ಬತ್ ಬಹಳ ಉತ್ತಮ. ಬೇಸಿಗೆಯಲ್ಲಿ ಬಾಯಾರಿಕೆಯನ್ನು ನೀಗಿಸಲು ಮತ್ತು ದೇಹವನ್ನು ತಂಪಾಗಿಸಲು ಪುದೀನ ಶರಬತ್ ನೀಡಲಾಗುತ್ತದೆ. ಪುದೀನ ಶರಬತ್ ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ಮೂಲಕ ಮಲಬದ್ಧತೆಗೆ ಸಹಾಯ ಮಾಡುತ್ತದೆ.
ಪ್ರಯೋಜನಗಳು: ದೇಹದ ಉಷ್ಣತೆ ಕಡಿಮೆ ಮಾಡುತ್ತದೆ, ಜೀರ್ಣಕ್ರಿಯೆ ಸುಧಾರಿಸುತ್ತದೆ, ಬಾಯಿಗೆ ತಾಜಾತನ ನೀಡುತ್ತದೆ.
ಸಬ್ಬಕ್ಕಿ ಗಂಜಿ / ರಾಗಿ ಮಾಲ್ಟ್
ರಾಗಿ ಮಾಲ್ಟ್ ಅಥವಾ ಸಬ್ಬಕ್ಕಿ ಗಂಜಿ ಬೇಸಿಗೆಯಲ್ಲಿ ಉತ್ತಮ ಆಯ್ಕೆ.
ಪ್ರಯೋಜನಗಳು: ಶಕ್ತಿ ನೀಡುತ್ತದೆ, ಹೊಟ್ಟೆ ತುಂಬಿರಿಸುತ್ತದೆ, ದೇಹವನ್ನು ತಂಪಾಗಿಡುತ್ತದೆ
ಬೇಸಿಗೆಯಲ್ಲಿ ಕೆಲವು ಪಾನೀಯಗಳಿಂದ ದೂರವಿರುವುದು ಉತ್ತಮ:
ಕೋಲ್ಡ್ ಡ್ರಿಂಕ್ಸ್ (ಸೋಡಾ)
ಹೆಚ್ಚು ಸಕ್ಕರೆ ಇರುವ ಜ್ಯೂಸ್ ಗಳು
ಕ್ಯಾಫಿನ್ ಹೆಚ್ಚು ಇರುವ ಪಾನೀಯಗಳು
ಇವು ದೇಹವನ್ನು ಇನ್ನಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಂದರೆ ಇಂತಹ ಪಾನೀಯದಿಂದ ತಲೆನೋವು, ಆಯಾಸ, ತಲೆತಿರುಗುವಿಕೆ ಮತ್ತು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು.
ಆರೋಗ್ಯಕರ ಸಲಹೆಗಳು:
ಅಧಿಕ ನೀರು ಕುಡಿಯಿರಿ: ದಿನವಿಡೀ ನಿಯಮಿತವಾಗಿ ನೀರು ಕುಡಿಯುವುದು ಮುಖ್ಯ. ದಿನಕ್ಕೆ ಕನಿಷ್ಠ ೩–೪ ಲೀಟರ್ ನೀರು ಕುಡಿಯಿರಿ. ಹೊರಗೆ ಹೋಗುವಾಗ ನೀರಿನ ಬಾಟಲ್ ತೆಗೆದುಕೊಂಡು ಹೋಗಿ. ತಾಜಾ ಮತ್ತು ಮನೆಯಲ್ಲಿ ಮಾಡಿದ ಪಾನೀಯಗಳನ್ನು ಮಾತ್ರ ಸೇವಿಸಿ. ಹೆಚ್ಚು ಸಕ್ಕರೆ ಬಳಸಬೇಡಿ.
ನಿಮ್ಮ ಆರೋಗ್ಯ ನಿಮ್ಮ ಆಯ್ಕೆ
ಬೇಸಿಗೆ ಕಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಪಾನೀಯಗಳ ಆಯ್ಕೆ ಅತ್ಯಂತ ಮುಖ್ಯ. ಎಳನೀರು, ಮಜ್ಜಿಗೆ, ನಿಂಬೆ ರಸ, ಹಣ್ಣು ರಸಗಳು ಮುಂತಾದವುಗಳು ದೇಹಕ್ಕೆ ತಂಪು, ಶಕ್ತಿ ಮತ್ತು ಪೋಷಕಾಂಶಗಳನ್ನು ಒದಗಿಸುತ್ತವೆ. ಈ ಬೇಸಿಗೆಯಲ್ಲಿ ರಾಸಾಯನಿಕ ಮಿಶ್ರಿತ ಪಾನೀಯ ಬಿಟ್ಟು, ಸ್ವಾಭಾವಿಕ ಆರೋಗ್ಯಕರ ಪಾನೀಯಗಳನ್ನು ಆರಿಸಿ. ಇದರಿಂದ ನೀವು ದೇಹವನ್ನು ತಂಪಾಗಿರಿಸಿಕೊಂಡು, ದಿನವಿಡೀ ಉತ್ಸಾಹದಿಂದ ಇರಬಹುದು.